ಮಂಜೇಶ್ವರ: ಡಾ.ನಾ.ಮೊಗಸಾಲೆಯವರ ಸಾಹಿತ್ಯ ಸೇವಾ ಕೈಂಕರ್ಯವು ಸಂಘಟನೆ, ಕಥನ ಮತ್ತು ಕಾವ್ಯವನ್ನೊಳಗೊಂಡ ತ್ರಿವಿಧ ಸ್ವರೂಪದ್ದಾಗಿದೆ. ಗದ್ಯ ಬರವಣಿಗೆಯ ಪಶ್ಚಾತ್ತಾಪದ ಫಲವೇ ಕಾವ್ಯದ ಹುಟ್ಟಿಗೆ ಕಾರಣ. ಅದು ಬೋಧೆಯಾಗಿರದೆ, ಅದರೊಳಗೆ ಅಂತರ್ಬೋಧೆಯ ಗುಣ ಕಂಡುಬರುತ್ತದೆ. ಅವರ ಕೃತಿಗಳು ಏಕಾಂತದಲ್ಲಿ ಅಂತರಂಗ ಕಂಡುಕೊಂಡ ಇಣುಕು ನೋಟವಾಗಿದೆ ಎಂದು ಚಿಂತಕ ರಾಮಪ್ರಸಾದ ಕಾಂಚೋಡು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಕಣ್ವತೀರ್ಥದಲ್ಲಿರುವ ಉಪನ್ಯಾಸಕ ಟಿ.ಎ.ಎನ್.ಖಂಡಿಗೆ ಅವರ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಈ ಹೊತ್ತಿಗೆ -ಈ ಹೊತ್ತಗೆ ಸರಣಿ ಪುಸ್ತಕ ವಿಮರ್ಶಾ ಮಾಲಿಕೆಯ ಭಾಗವಾಗಿ ಭಾನುವಾರ ನಡೆದ 12ನೇ ಸರಣಿಯಲ್ಲಿ ಡಾ.ನಾ.ಮೊಗಸಾಲೆಯವರ ಕಾಮನೆಯ ಬೆಡಗು ಕೃತಿಯ ಕುರಿತು ಅವರು ಮಾತನಾಡಿದರು.
ಮೊಗಸಾಲೆಯವರ ಕೃತಿ ಭೂತ-ವರ್ತಮಾನಗಳನ್ನು ಆವರಣವಿಲ್ಲದೆ ಸಂದಿಸುತ್ತದೆ. ಪ್ರತಿರೋಧದ ಅಟ್ಟಹಾಸಗಳು ನಿಜವಾದ ಕಾವ್ಯಗಳಲ್ಲ. ಅವೆಲ್ಲ ಕಾವ್ಯದ ಸಂಚಾರಿ ಭಾವಗಳಾಗಿದ್ದು, ಅನುಭಾವವೇ ಕಾವ್ಯದ ನೈಜ ಸ್ಥಾಯೀಭಾವ ಎಂದು ಕಾಂಚೋಡು ವಿಶ್ಲೇಶಿಸಿದರು. ಹೊಸಗನ್ನಡ ಕಾವ್ಯಗಳನ್ನು ಅನುಭಾವದ ನೆಲೆಗೆ ತಿರುಗಿಸಿದ ಕೀರ್ತಿ ವಚನಕಾರರದ್ದು. ಆ ಬಳಿಕದ ಆ ಮನ್ನಣೆ ಮೊಗಸಾಲೆಯವರಿಗೆ ಸಲ್ಲಬೇಕು ಎಮದು ಅವರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕ ಟಿ.ಎ.ಎನ್.ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಮನಸ್ಸು, ಬುದ್ದಿಗಳನ್ನು ಅರಳಿಸುವ ಕಾವ್ಯಗಳು ಬೆಳೆಯಬೇಕು. ಕೆರಳಿಸುವ ಪ್ರಕ್ರಿಯೆ ಗೆ ಕಾವ್ಯದ ಬಣ್ಣ ಸರಿದೂಗದು. ಈ ಹಿನ್ನೆಲೆಯಲ್ಲಿ ಬೆಸೆಯುವ-ಬೆರಗುಗೊಳಿಸುವ ಅಕ್ಷರ ಸಮೃದ್ದಿಯ ಪರಿಚಯ ಅಂತರಂಗಕ್ಕೆ ನಾಟಿಸುವ ಯತ್ನ ಈ ಸರಣಿಗಳ ಲಕ್ಷ್ಯವಾಗಿದೆ ಎಂದು ತಿಳಿಸಿ ಸ್ವಾಗತಿಸಿದರು. ಕವಿತಾ ಕೂಡ್ಳು ಅವರು ಈವರೆಗೆ ನಡೆದುಬಂದ 12 ಕೃತಿಗಳ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿದರು. ಕುಂಜತ್ತೂರಿನ ಸಾಹಿತ್ಯ ಕೂಟದ ಕಾರ್ಯದರ್ಶಿ ಕೆ.ಪಿ.ಸೋಮಶೇಖರ ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ವಂದಿಸಿದರು. ಉಪನ್ಯಾಸದ ಬಳಿಕ ಸಾಹಿತ್ಯಾಸಕ್ತರಿಂದ ಬಹುಮುಖದ ಸಮಗ್ರ ಸಂವಾದ ನಡೆಯಿತು.