ಬದಿಯಡ್ಕ: ಅಬ್ಬರದ ವರ್ಣನಾತೀತ ಪಾತ್ರ ಪ್ರಸ್ತುತಿಯ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಅಸಾಮಾನ್ಯ ಕಲಾಸೇವೆಗೈದ ಬಣ್ಣದ ಮಹಾಲಿಂಗನವರ ಪಾತ್ರಚಿತ್ರಣಗಳು ಎಂದಿಗೂ ಮೀರಲಾರದ ಎತ್ತರದಲ್ಲಿದ್ದು, ಅವರಷ್ಟು ಬಣ್ಣ ಆವಾಹಿಸಿದ ಮತ್ತೊಬ್ಬ ಕಲಾವಿದ ಇರಲಾರರು. ಅವರೊಂದಿಗಿನ ಒಡನಾಟ ಎಂದಿಗೂ ಅಚ್ಚಳಿಯದ ಪ್ರಭಾವವನ್ನು ಸಹವರ್ತಿಗಳಿಗೆ ನೀಡಿದ ಕಲಾ ತಪಸ್ವಿಯಾಗಿದ್ದರು ಎಂದು ಹಿರಿಯ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುತ್ತೂರಿನ ಬಣ್ಣದ ಮಹಾಲಿಂಗ ಯಕ್ಷಪ್ರತಿಷ್ಠಾನದ ನೇತೃತ್ವದಲ್ಲಿ ಭಾನುವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ಬಣ್ಣದ ಮಾಲಿಂಗ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಮತ್ತು ಯಕ್ಷಗಾನ ಬಯಲಾಟ ಸಮಾರಂಭವನ್ನು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಅವರು ಮಾತನಾಡಿದರು.
ಸರಳ-ಮಿತಭಾಷಿ ವ್ಯಕ್ತಿತ್ವದ ಮಹಾಲಿಂಗನವರ ಬದುಕು ಆದರ್ಶಪ್ರಾಯ. ಅನುಕರಣೀಯ ವ್ಯಕ್ತಿತ್ವದ ಅವರು ರಂಗಭಾಷೆಯನ್ನು ಸ್ಪಷ್ಟವಾಗಿ ಅರ್ಥೈಸಿದ ನಟ ಸಾರ್ವಭೌಮನಾಗಿ ಗುರುತಿಸಬಹುದಾದವರು. ಕಸುಬಿನ ಮೇಲೆ ಅಪಾರ ಗೌರವ-ಅಭಿಮಾನವಿರಿಸಿದ್ದ ಅವರು ಅಪರಿಮಿ ಶ್ರಮದ ಮೂಲಕ ಬಣ್ಣದ ವೇಶದ ನವ್ಯ ಭಾಷ್ಯಕಾರರು ಎಂದು ಬಣ್ಣಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬಣ್ಣದ ಮಹಾಲಿಂಗರ ಬಗ್ಗೆ ಸಂಸ್ಮರಣಾ ಭಾಷಣಗೈದ ಸುಳ್ಯದ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ, ಹಿರಿಯ ವಿದ್ವಾಂಸ ಡಾ.ಚಂದ್ರಶೇಖರ ದಾಮ್ಲೆ ಅವರು, ನಿತ್ಯ ಸೃಜನಶೀಲ ಚಕಿತಗೊಳಿಸುವ ಮಹಾಲಿಂಗರ ಪಾತ್ರಚಿತ್ರಣ ಅವರ ಚುಟ್ಟಿಯಷ್ಟೇ ನಿಖರವಾದುದು. ನಿಗರ್ವಿ, ಸರಳ ಸಜ್ಜನ ವ್ಯಕ್ತಿತ್ವದಿಂದಲೇ ಅವರು ಗಾಂಧಿ ಮಹಾಲಿಂಗ ಎನಿಸಿದರು ಎಂದು ತಿಳಿಸಿದರು. ವಿವಿಧ ಆಸಕ್ತಿಗಳಲ್ಲಿ ಛಿದ್ರಗೊಂಡಿರುವ ಆಧುನಿಕ ಸಮಾಜದಲ್ಲಿ ಯಕ್ಷಗಾನದಂತಹ ಪರಿಪೂರ್ಣ ಕಲೆಯ ಪರಂಪರೆಯ ನಾಶದ ಭೀತಿ ಎದುರಾಗಿರುವುದು ನಿಜ. ಆದರೆ ಬಣ್ಣದ ಮಹಾಲಿಂಗ ಅವರಂತವರ ಜೀವ-ಜೀವನ ರೂಪಿಸಿರುವ ವರ್ಣ ಸಾಧ್ಯತೆಗಳ ಮೇರುತ್ವವನ್ನು ಅವಗಣಿಸುವುದು ಅಪರಾಧವಾಗಿದ್ದು, ಅವರ ನೆನಪುಗಳೊಂದಿಗೆ ಇಂತಹ ಕಾರ್ಯಕ್ರಮಗಳು, ಪರಂಪರೆಯ ಪ್ರದರ್ಶನಗಳು ಇನ್ನಷ್ಟು ನಾಡಿನೆಲ್ಲೆಡೆ ಪಸರಿಸಬೇಕು ಎಂದು ತಿಳಿಸಿದರು.
ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ಹಿರಿಯ ಬಣ್ಣದ ವೇಶಧಾರಿ ಬೊಮ್ಮಾರು ಐತ್ತಪ್ಪ ಗೌಡ ಮರ್ಕಂಜ ಅವರಿಗೆ ಪ್ರದಾನಗೈಯ್ಯಲಾಯಿತು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣಗೈದರು. ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರಿಗೆ ಬಣ್ಣದ ಮಹಾಲಿಂಗ ಸ್ಮøತಿಪ್ರಶಸ್ತಿ ಪ್ರದಾನಗೈಯ್ಯಲಾಯಿತು. ಯತೀಶ್ ಕುಮಾರ್ ರೈ ಅಭಿನಂದನಾ ಭಾಷಣಗೈದರು. ಜೊತೆಗೆ ನಿವೃತ್ತ ಕಲಾವಿದ ತೇರಪ್ಪ ಪಾಟಾಳಿ ಸರಾವು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರತಿಷ್ಠಾನದ ಕಾರ್ಯದರ್ಶಿ ನಾರಾಯಣ ದೇಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಮೊದಲು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಶೂರ್ಪನಖಾ-ಖರಾಸುರ ಹಾಗೂ ಬಳಿಕ ಮಹಿರಾವಣ ಕಾಳಗ ಯಕ್ಷಗಾನ ಪ್ರದರ್ಶನ ಕಿಕ್ಕಿರಿದ ಪ್ರೇಕ್ಷಕರ ಮಧ್ಯೆ ಅಪೂರ್ವ ಸಂಯೋಜನೆಗಳೊಂದಿಗೆ ನಡೆದು ಸಂಪನ್ನಗೊಂಡಿತು.