ಕಾಸರಗೋಡು: ವಿದ್ಯಾಸಂಸ್ಥೆಗಳು ಮಕ್ಕಳಿಗೆ ಶಿಕ್ಷಣದೊಂದಿಗೆ ಜೀವನ ಮೌಲ್ಯಗಳ ಸಂಸ್ಕಾರದ ಶಿಕ್ಷಣವನ್ನು ನೀಡಬೇಕು. ಸಂಸ್ಕøತಿ ಹಾಗು ಧಾರ್ಮಿಕ ಚಿಂತನೆಗಳನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಉಪನ್ಯಾಸಕಿ ಸೌಮ್ಯಾ ಪ್ರಸಾದ್ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಆಶ್ರಯದಲ್ಲಿ ಕೀಕಾನದ ನಲಂದಾ ಪಬ್ಲಿಕ್ ಸ್ಕೂಲ್‍ನಲ್ಲಿ ಗುರುವಾರ ಆಯೋಜಿಸಿದ ಕಾಸರಗೋಡು ದಸರಾ ಕಾರ್ಯಕ್ರಮದಲ್ಲಿ ದಸರಾ ವಿಶೇಷೋಪನ್ಯಾಸ ನೀಡಿ ಅವರು ಮಾತನಾಡಿದರು.
ಮಕ್ಕಳನ್ನು ಸರಿಯಾದ ದಿಕ್ಕಿನಲ್ಲಿ ಸಾಗಲು ಮಾರ್ಗದರ್ಶನ ನೀಡಬೇಕು ಮತ್ತು ಸತ್ಪ್ರಜೆಗಳನ್ನಾಗಿ ರೂಪಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು. ಮಕ್ಕಳನ್ನು ತಿದ್ದಿ ತೀಡುವಲ್ಲಿ ಹೆತ್ತವರು ಹಾಗು ಅಧ್ಯಾಪಕರು ತಮ್ಮ ಕರ್ತವ್ಯವನ್ನು ಪಾಲಿಸಬೇಕು ಎಂದರು. ಹಬ್ಬಗಳ ಆಚರಣೆಯಿಂದ ಕೇವಲ ಸಂತೋಷ ಮಾತ್ರವಲ್ಲ. ಸಾಮರಸ್ಯದ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಸಾಮೂಹಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಗಳ ಮೂಲಕ ಪರಸ್ಪರ ಪ್ರೀತಿ, ವಿಶ್ವಾಸ ಮೂಡುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮವನ್ನು ಬಾರಿಕ್ಕಾಡು ಶ್ರೀ ಮಲ್ಲಿಕಾರ್ಜುನ ದೇವಳ ಅಧ್ಯಕ್ಷ ಬಾಲಕೃಷ್ಣ ಎಂ.ಮಲ್ಲಿಗೆಮಾಡು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಲಂದಾ ಪಬ್ಲಿಕ್ ಸ್ಕೂಲ್ ಟ್ರಸ್ಟ್ ಅಧ್ಯಕ್ಷ ನಿರಂಜನ ಕೊರಕ್ಕೋಡು ಅಧ್ಯಕ್ಷತೆ ವಹಿಸಿದರು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅಭ್ಯಾಗತರಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಚಾಮುಂಡಿಗುಡ್ಡೆ ಶ್ರೀ ವಿಷ್ಣು ಚಾಮುಂಡೇಶ್ವರಿ ದೇವಸ್ಥಾನದ ಮೊಕ್ತೇಸರ ಹರಿಶ್ಚಂದ್ರ ನಾಯ್ಕರ ಹಿತ್ತಿಲು ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕವಿ ಚಂದ್ರಹಾಸ ಎಂ.ಬಿ.ಚಿತ್ತಾರಿ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದು, ಕಾರ್ಯಕ್ರಮ ನಿರೂಪಿಸಿದರು. ಸಂದೇಶ್ ಕೋಟೆಕಣಿ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಚಿತ್ತರಂಜನ್ ಕಡಂದೇಲು ಅವರಿಂದ ಏಕ ವ್ಯಕ್ತಿ ಯಕ್ಷಗಾನ `ವೀರ ಬಬ್ರುವಾಹನ' ಮತ್ತು ಕಿರಣ್ ಕಲಾಂಜಲಿ ಅವರಿಂದ `ಸತ್ಯದರ್ಶನ' ಏಕ ವ್ಯಕ್ತಿ ನಾಟಕ ಮತ್ತು ದಿವಾಕರ ಪಿ.ಅಶೋಕನಗರ ಹಾಗು ಶ್ರೀಕಾಂತ್ ಕಾಸರಗೋಡು ಅವರಿಂದ ದಸರಾ ಗೀತೆಗಳ ಗಾಯನ ನಡೆಯಿತು.