ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರನ್ನು ಜೆಡಿಯುನ ಅಧ್ಯಕ್ಷರನ್ನಾಗಿ ಮತ್ತೊಂದು ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಜೆಡಿಯು ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ನಿನ್ನೆ ಕೊನೆಯ ದಿನವನ್ನು ನಿಗದಿಪಡಿಸಲಾಗಿತ್ತು. ಆ ಸ್ಥಾನಕ್ಕೆ ನಿತೀಶ್ ಕುಮಾರ್ ಒಬ್ಬರೇ ಅಭ್ಯರ್ಥಿಯಾಗಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪಕ್ಷದ ರಾಷ್ಟ್ರೀಯ ಚುನಾವಣಾಧಿಕಾರಿ ಅನೀಲ್ ಹೆಗ್ಡೆ ತಿಳಿಸಿದ್ದಾರೆ. ನಿತೀಶ್ ಕುಮಾರ್ ಪರವಾಗಿ ಪಕ್ಷದ ಮುಖಂಡರು ನಾಲ್ಕು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದರು. ಧೀರ್ಘಕಾಲದಿಂದಲೂ ಪಕ್ಷದ ಅಧ್ಯಕ್ಷರಾಗಿರುವ ನಿತೀಶ್ ಕುಮಾರ್, ಮುಂಬರುವ ವಿಧಾನಸಭಾ ಉಪ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯೂ ಆತಂಕಕಾರಿವಾಗಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಅನೇಕ ಕಾರಣಗಳಿಂದಾಗಿ ಮೈತ್ರಿ ನಾಯಕತ್ವವನ್ನು ಟೀಕಿಸಿದ್ದಾರೆ. ವಿಶೇಷವಾಗಿ ಪಾಟ್ನಾದಲ್ಲಿನ ಪ್ರವಾಹ ನಿರ್ವಹಣೆ ಕುರಿತಂತೆ ಧ್ವನಿ ಎತ್ತಿದ್ದಾರೆ. ಕೇಸರಿ ಪಕ್ಷದ ನಾಯಕರು ಮೈತ್ರಿ ನಾಯಕತ್ವ ವಹಿಸಿಕೊಳ್ಳಲು ನಿತೀಶ್ ಕುಮಾರ್ ದಾರಿ ಮಾಡಿಕೊಡಬೇಕೆಂದು ಮತ್ತೊಬ್ಬ ಬಿಜೆಪಿ ಮುಖಂಡ ಸಂಜಯ್ ಪಾಸ್ವಾನ್ ಒತ್ತಾಯಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಮೈತ್ರಿಯಲ್ಲೂ ಪಾರುಪತ್ಯ ಸಾಧಿಸಲು ಯತ್ನಿಸುತ್ತಿದೆ. ಆದಾಗ್ಯೂ, ನಿತೀಶ್ ಕುಮಾರ್ ಅವರ ವರ್ಚಸ್ಸು ಎಂದಿಗೂ ಮಂಕಾಗುವುದಿಲ್ಲ ಎಂಬುದು ಜೆಡಿಯು ಮುಖಂಡರ ವಿಶ್ವಾಸವಾಗಿದೆ.