ಪೆರ್ಲ:ಮಕ್ಕಳಲ್ಲಿರುವ ಸ್ತುಪ್ತ ಪ್ರತಿಭೆಯನ್ನು ಗುರುತಿಸಿ ಅದನ್ನು ಅನಾವರಣಗೊಳಿಸುವಲ್ಲಿ ಶಾಲಾ ಕಲೋತ್ಸವಗಳು ಪ್ರಧಾನ ಪಾತ್ರವಹಿಸುತ್ತಿವೆ ಎಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಂ.ಆಶ್ರಫ್ ಹೇಳಿದರು.
ಶೇಣಿ ಶ್ರೀ ಶಾರದಾಂಬ ವಿದ್ಯಾಸಂಸ್ಥೆಯಲ್ಲಿ ಬುಧವಾರ ಸಂಜೆ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತಿರಲಿಲ್ಲ.ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ, ಅವಕಾಶಗಳು ಲಭ್ಯವಿರಲಿಲ್ಲ. ಪ್ರತಿಭಾನ್ವಿತರು ಸ್ವ ಆಸಕ್ತಿಯಿಂದ ಮಾತ್ರ ಬೆಳಕಿಗೆ ಬರುತ್ತಿದ್ದರು.ಯಕ್ಷಭೀಷ್ಮ ಶೇಣಿ ಗೋಪಾಲಕೃಷ್ಣ ಭಟ್, ರಾಷ್ಟ್ರಕವಿ ಗೋವಿಂದ ಪೈ ಮೊದಲಾದವರು ಅವರದೇ ಪ್ರಯತ್ನದಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗಕ್ಕೆ ಉದಾತ್ತವಾದ ಕೊಡುಗೆ ನೀಡಿದ್ದಾರೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವಲ್ಲಿ ವಿಪುಲ ಅವಕಾಶಗಳಿವೆ. ಸಾಧಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ, ಅವರನ್ನು ರಾಜ್ಯ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುವಂತೆ ಮಾಡುವಲ್ಲಿ ಶಾಲಾ ಕಲೋತ್ಸವಗಳು ಸಫಲವಾಗಿದೆ.ಶಾಸ್ತ್ರೀಯ ನೃತ್ಯ, ನಾಟಕ, ಜಾನಪದ ವೈವಿಧ್ಯಗಳ ಸಂಗಮವಾಗಿ ನೆಲದ ಸಾಂಸ್ಕೃತಿಕತೆಯ ಪ್ರತೀಕ ಹಾಗೂ ಬೆಳವಣಿಗೆಗೆ ಪೂರಕವಾಗಿ ಕಲೋತ್ಸವಗಳು ಮೂಡಿಬರುತ್ತಿವೆ.ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ವೇದಿಕೆಯಾಗಿ ಭವಿಷ್ಯದ ಸಾಧಕರಾಗಿ ಗುರುತಿಸುವಲ್ಲಿ ಶಾಲಾ ಕಲೋತ್ಸವ ದಾರಿದೀಪವಾಗಲಿ ಎಂದು ಹಾರೈಸಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಭಿಮಾನಿಗಳ ಪ್ರೋತ್ಸಾಹ, ಸಹಕಾರದಿಂದ ಶೇಣಿಯಲ್ಲಿ ನಡೆಯುತ್ತಿರುವ ಕಲೋತ್ಸವಕ್ಕೆ ಗ್ರಾಮೀಣ ಉತ್ಸವದ ಪ್ರತೀತಿ ಸೃಷ್ಟಿಸಲು ಸಾಧ್ಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಮಣಿಯಂಪಾರೆ ಸಂತ ಲಾರೆನ್ಸ್ ಇಗರ್ಜಿಯ ಫಾದರ್ ಪೌಲ್ ಡಿ'ಸೋಜ ಉಪಸ್ಥಿತದಿದ್ದರು.
ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಖಂಡಿಗೆ, ಕುಂಬ್ಡಾಜೆ ಗ್ರಾ.ಪಂ.ಉಪಾಧ್ಯಕ್ಷ ಆನಂದ ಮವ್ವಾರು, ಎಣ್ಮಕಜೆ ಗ್ರಾಮ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಜಯಶ್ರೀ ಕುಲಾಲ್, ಆಯಿಷಾ.ಎ.ಎ, ಚಂದ್ರಾವತಿ ಎಂ., ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಸಫ್ರಿನಾ, ಸವಿತಾ ಬಾಳಿಕೆ, ಎಣ್ಮಕಜೆ ಗ್ರಾ.ಪಂ.ಸದಾಸ್ಯರುಗಳಾದ ಪುಷ್ಪಾ.ವಿ, ಐತ್ತಪ್ಪ ಕುಲಾಲ್, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ, ಮಾಜಿ.ಜಿ.ಪಂ.ಸದಸ್ಯ ಶಂಕರ ರೈ ಮಾಸ್ತರ್, ಅಬೂಬಕ್ಕರ್ ಪೆರ್ದನೆ, ಶೇಣಿ ಶಾಲಾ ಪ್ರಬಂಧಕ ಸೋಮಶೇಖರ್ ಜೆ.ಎಸ್., ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷರುಗಳಾದ ಮೊಯ್ದೀನ್ ಕುಟ್ಟಿ, ವಿಲ್ಸನ್ ಡಿ.ಸೋಜ, ಪ್ರಾಂಶುಪಾಲೆ ವಿಜಯಲಕ್ಷ್ಮಿ ವಿ., ಶೇಣಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಾಧಾಕೃಷ್ಣ ಜೆ.ಎಸ್.ಶೇಣಿ ಉಪಸ್ಥಿತರಿದ್ದರು.
ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಸ್ವಾಗತಿಸಿ, ಶೇಣಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶ್ರೀಶ ಕುಮಾರ್ ಎಂ.ಪಿ.ವಂದಿಸಿದರು.