ಉಪ್ಪಳ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೊಸ ಹೊಸ ಜ್ಞಾನಶಿಸ್ತುಗಳನ್ನು ಕಲಿತು ಕಾಲದ ಅಗತ್ಯಕ್ಕೆ ತಕ್ಕಂತೆ ವ್ಯಕ್ತಿತ್ವ ವಿಕಾಸ ಮಾಡಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕೆಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಪೈವಳಿಕೆ ನಗರದ ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಿ ಮಂಗಳವಾರ ಆರಂಭಗೊಂಡ ಮಂಜೇಶ್ವರ ಉಪಜಿಲ್ಲಾ ಕೇರಳ ಶಾಲಾ ಕಲೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೇವಲ ಪಠ್ಯಪುಸ್ತಕದ ಓದಿನಿಂದ ಶಿಕ್ಷಣ ಪರಿಪೂರ್ಣವಾಗುವುದಿಲ್ಲ. ಜೀವನ ವಿಶ್ವವಿದ್ಯಾಲಯದಲ್ಲಿ ಯಶಸ್ಸು ಸಾಧಿಸಬೇಕಾದರೆ ಕೌಶಲಗಳನ್ನು ವೃದ್ಧಿಸಿಕೊಳ್ಳುವುದು ತೀರ ಅಗತ್ಯ. ಹಾಗಾಗಿ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಲಿಕೆಯ ಜೊತೆಗೆ ಕೌಶಲಾಭಿವೃದ್ಧಿಯ ಅಂಶಗಳನ್ನು ಸೇರಿಸಿಕೊಂಡು ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಯ ಕಡೆಗೆ ಗಮನ ಕೇಂದ್ರೀಕರಿಸಲಾಗಿದೆ. ಅವುಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ವಿಶ್ವ ಸಮುದಾಯದೊಂದಿಗೆ ಸ್ಪರ್ಧಿಸಿ ದೇಶಕ್ಕೆ ಗುಣಾತ್ಮಕ ಕೊಡುಗೆ ನೀಡಲು ಸಾಧ್ಯ ಎಂದು ಡಾ. ಪೆರ್ಲ ಹೇಳಿದರು.
ಕೇರಳವು ಸಂಪೂರ್ಣ ಸಾಕ್ಷರ ದೇಶವಾಗಿದ್ದು, ಇಲ್ಲಿನ ಶಾಲಾ ಕಲೋತ್ಸವವು ಏಷ್ಯಾದಲ್ಲೇ ಅತಿ ದೊಡ್ಡ ಸಾಂಸ್ಕೃತಿಕ ಉತ್ಸವವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿವಿಧತೆ ಮತ್ತು ಬಹುತ್ವವಿರುವ ನಮ್ಮ ದೇಶದಲ್ಲಿ ಸ್ಥಳೀಯ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಕೂಡ ತೀರಾ ಅಗತ್ಯ ಎಂದು ಅವರು ಹೇಳಿದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಮಮತಾ ದಿವಾಕರ್ ಕಾರ್ಯಕ್ರಮ ಉದ್ಘಾಟಿಸಿ ನಾಲ್ಕು ದಿನಗಳ ಕಾಲ ನಡೆಯುವ ಕಲೋತ್ಸವವು ಯಶಸ್ವಿಯಾಗಲೆಂದು ಹಾರೈಸಿದರು.
ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೂರು ಹಂತದ ಸ್ಪರ್ಧೆಗಳು ಮುಗಿದು, ಅಂತಿಮವಾಗಿ ಅಖಿಲ ಕೇರಳ ಮಟ್ಟದ ಶಾಲಾ ಕಲೋತ್ಸವವು ಈ ಬಾರಿ ಕಾಸರಗೋಡು ಜಿಲ್ಲೆಯಲ್ಲಿ ನಡೆಯಲಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಪೈವಳಿಕೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುನೀತ ವಾಲ್ಟಿ ಡಿಸೋಜ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರಾ, ಶಿಕ್ಷಕ-ರಕ್ಷಕ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಪಾವಲ್ಕೋಡಿ ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರ ಉಪಜಿಲ್ಲಾ ಸಹಾಯಕ ಶಿಕ್ಷಣಾಧಿಕಾರಿ ದಿನೇಶ್ ವಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟಕ ಸಮಿತಿಯ ಪ್ರಧಾನ ಸಂಚಾಲಕ ಪ್ರಾಂಶುಪಾಲ ವಿಶ್ವನಾಥ ಕೆ. ಸ್ವಾಗತಿಸಿ, ಸ್ವಾಗತ ಸಮಿತಿಯ ಸಂಚಾಲಕಿ ಸುಮಿತ್ರಾ ಕೆ. ವಂದಿಸಿದರು. ನಾಲ್ಕು ದಿನಗಳ ಕಾಲ ನಡೆಯುವ ಕಲೋತ್ಸವದಲ್ಲಿ ಮಂಜೇಶ್ವರ ಉಪಜಿಲ್ಲೆಯ ಸುಮಾರು ತೊಂಬತ್ತು ಶಾಲೆಗಳ ನೂರಾರು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ.