HEALTH TIPS

ಬಣ್ಣದ ಮೈನವಿರೇಳಿಸುವ ಬೆಡಗಿನೊಂದಿಗೆ ಅನ್ವರ್ಥರಾದ ಸಾಧಕನಿಗೊಂದು ನಮನದೊಂದಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಮತ್ತೊಂದು ಹೆಜ್ಜೆ ಇಂದು ನೀರ್ಚಾಲಿನಲ್ಲಿ

     
         ಯಕ್ಷಗಾನ ಪ್ರಕಾರದಲ್ಲಿ ಬಣ್ಣದ ವೇಷವೆಂದು ಕರೆಯಲ್ಪಡುವ ರಾಕ್ಷಸ ಮತ್ತು ರಾಕ್ಷಸ ಗುಣಗಳನ್ನು ಹೊಂದಿರುವ ಪಾತ್ರಗಳಿಗೆ ವಿಶೇಷವಾದ ಸ್ಥಾನವಿದೆ. ಸಾಂಪ್ರದಾಯಿಕ ಯಕ್ಷಗಾನ ಬಯಲಾಟವು ಬಣ್ಣದ ವೇಷವೊಂದರ ಹೊರತು ಅಪೂರ್ಣವೆನ್ನುವುದು ಸಾರ್ವತ್ರಿಕ ಅಭಿಪ್ರಾಯ.
     ಇಂತಹ ಬಣ್ಣದ ವೇಷಗಳಲ್ಲಿ ಸರಿಸುಮಾರು ಏಳು ದಶಕಗಳ ಕಾಲ ಮಿಂಚಿದ ಒಬ್ಬ ಅದ್ಫುತ ಕಲಾವಿದ  ಬಣ್ಣದ ಮಹಾಲಿಂಗ ಸಂಪಾಜೆಯವರು. ಅವರು ಇಂದು ಜೀವಿಸಿರುತ್ತಿದ್ದರೆ ಶತಾಯುಷಿಗಳಾಗಿ ನಮ್ಮೊಡನಿರುತ್ತಿದ್ದರು. ತನ್ನ ಅದ್ಭುತ ಪ್ರತಿಭೆಯಿಂದಲೇ ಯಕ್ಷರಂಗವನ್ನು ಬೆರಗು ಹುಟ್ಟಿಸಿದ ಯಕ್ಷರಾತ್ರಿಗಳ ಈ ಪ್ರಚಂಡ ರಾಕ್ಷಸ 2004ರ ಮೇ.25. ರಂದು ಇಹಲೋಕದವನ್ನು ತ್ಯಜಿಸಿದಾಗ ಅವರ ಪ್ರಾಯ 91.
     1913ರಲ್ಲಿ ಕಾಸರಗೋಡು ಜಿಲ್ಲೆಯ ಕಾರಡ್ಕ ಸಮೀಪದ ಚೆನ್ನಂಗೋಡಿನಲ್ಲಿ ಹುಟ್ಟಿದ ಮಹಾಲಿಂಗರು ಕಲಿತದ್ದು ಕೇವಲ ಕಿರಿಯ ಪ್ರಾಥಮಿಕ ಹಂತದವರೆಗೆ ಮಾತ್ರ. ನಂತರದ್ದೇನಿದ್ದರೂ ಯಕ್ಷಗಾನದ ಕಲಾ ಕಾಯಕ. ಬಲುದೊಡ್ಡ ಕಲಾವಿದರ ಕೌಟುಂಬಿಕ ಪರಿಸರದ ಹಿನ್ನೆಲೆಯೊಂದಿಗೆ ಯಕ್ಷರಂಗಕ್ಕೆ ಕಾಲಿಟ್ಟ ಮಹಾಲಿಂಗರಿಗೆ ಮಂಜಪ್ಪ ಹಾಸ್ಯಗಾರರು ನೃತ್ಯ ಗುರು, ಅಜ್ಜ ಶಂಕರ ಭಾಗವತರ ಮಾರ್ಗದರ್ಶನ, ಕೊರಕ್ಕೋಡು ಮೇಳದಲ್ಲಿ ಮೊದಲ ತಿರುಗಾಟ. ಕೊಡಂಗಿಯಿಂದಾರಂಭಿಸಿ ಕ್ರಮದಂತೆ ಹಂತ ಹಂತವಾಗಿ ಮುನ್ನಡೆದರು. ಬಳಿಕ ನಾಡಿನ ಹೆಸರಾಂತ ಮೇಳಗಳಾದ ಕೂಡ್ಲು, ಕದ್ರಿ, ಧರ್ಮಸ್ಥಳ, ಸುರತ್ಕಲ್ ಮತ್ತು ಕಟೀಲು ಮೇಳಗಳಲ್ಲಿ ತಿರುಗಾಟವನ್ನು ಮಾಡಿದರು.  ರಂಗದ ಅನುಭವ ಮತ್ತು ಸಾಮಥ್ರ್ಯ ಕೆಲವೇ ವರ್ಷಗಳಲ್ಲಿ ಮಹಾಲಿಂಗರನ್ನು ಒಬ್ಬ ಪ್ರಬುದ್ಧ ಬಣ್ಣದ ವೇಷಧಾರಿಯಾಗಿ ರೂಪಿಸಿತು. ಸಾಂಪ್ರದಾಯಿಕವಾದ ಎಲ್ಲ ಬಗೆಯ ಬಣ್ಣದ ವೇಷಗಳನ್ನೂ
ಮಾಡುತ್ತಿದ್ದ ಮಹಾಲಿಂಗರಿಗೆ ಅತ್ಯಂತ ಹೆಚ್ಚು ಪ್ರಸಿದ್ದಿಯನ್ನು ತಂದು ಕೊಟ್ಟದ್ದು ಮಹಿರಾವಣ, ವೀರಭದ್ರ, ಅಜಮುಖಿ ಮತ್ತು ರುದ್ರಭೀಮನ ಪಾತ್ರಗಳು. ಸುದೀರ್ಘವಾದ ಅನುಭವ, ಸಂಪ್ರದಾಯದ ಸರಿಯಾದ ತಿಳುವಳಿಕೆ, ಬಣ್ಣದ ವೇಷಗಳ ಎಲ್ಲಾ ಬಗೆಯ ಮುಖವರ್ಣಿಕೆಗಳ ಕುರಿತಾದ ನಿಖರವಾದ ಜ್ಞಾನ, ರಂಗಸ್ಥಳವನ್ನು ಇಡಿಯಾಗಿ ವ್ಯಾಪಿಸುವ ಚಲನೆಗಳ ಅಬ್ಬರದ ಕುಣಿತ, ಬಣ್ಣದ ವೇಷಕ್ಕೊಪ್ಪುವ ಆಳ್ತನ, ಏರು ಸ್ವರ ಇತ್ಯಾದಿ ಅಂಶಗಳು ಬಣ್ಣದ ಮಹಾಲಿಂಗರನ್ನು ದಶಕಗಳ ಕಾಲ ಸಮಕಾಲೀನ ರಂಗ ವೇದಿಕೆಗಳಲ್ಲಿ ಅದ್ಭುತ ಕಲಾವಿದನಾಗಿ ಮೆರೆಸುವುದಕ್ಕೆ ಕಾರಣವಾದ ಅಂಶಗಳಾಗಿದ್ದವು.
      ಹೀಗೆ ಸರಿ ಸುಮಾರು ಏಳು ದಶಕಗಳ ಕಾಲ ಪರಂಪರೆಯ ಯಕ್ಷಗಾನ ಪ್ರಿಯರಿಗೆ ಕಲೆಯ ರಸದೌತಣವನ್ನು ಉಣ ಬಡಿಸಿದ, ತೆಂಕುತಿಟ್ಟು ಯಕ್ಷಗಾನ ರಂಗಕ್ಕೆ ತನ್ನ ಕಲಾ
ಪ್ರೌಢಿಮೆಯಿಂದಲೇ ಪ್ರಾತಿನಿಧಿಕ ರೂಪವನ್ನು ಕೊಟ್ಟ ಮೇರು ಕಲಾವಿದನಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಕರ್ಗಲ್ಲು ಪ್ರಶಸ್ತಿ, ನಿಡ್ಲೆ ಪ್ರಶಸ್ತಿ, ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯಿಂದ ಪೌರ ಅಭಿನಂದನೆ ಮತ್ತು ನಾಡಿನ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಪ್ರಶಸ್ತಿಗಳು ಕೊಡಲ್ಪಟ್ಟಿದೆ. ಸುಳ್ಯದ ರಂಗಮನೆಯಲ್ಲಿ ಬಣ್ಣದ ಮಹಾಲಿಂಗರ ಮಹಿರಾವಣ ಪಾತ್ರದ ಬೃಹತ್ ಕಾಂಕ್ರೀಟ್ ಪ್ರತಿಮೆಯನ್ನೇ ನಿರ್ಮಿಸಿ ರಂಗ ಸಾಧಕ ಜೀವನ್ ರಾಂ ಸುಳ್ಯ ಮತ್ತು ಅವರ ತಂದೆ ಸುಜನಾ ಸುಳ್ಯರವರು ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.  ಇಷ್ಟೆಲ್ಲಾ ಗೌರವ ಸನ್ಮಾನಗಳು ಲಭಿಸಿದರೂ ಅವರ ಹೆಸರಿನಲ್ಲೊಂದು ಸಂಸ್ಥೆ ಇಲ್ಲ ಎಂಬ ಕೊರಗು ನಿರಂತರವಾಗಿ
ಯಕ್ಷಗಾನ ಅಭಿಮಾನಿಗಳನ್ನು ಕಾಡುತ್ತಿತ್ತು. ಈ ಕೊರಗನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅವರ ಅಭಿಮಾನಿಗಳು ಬಣ್ಣದ ಮಹಾಲಿಂಗರ ಸುಪುತ್ರ  ಬಣ್ಣದ
ಸುಬ್ರಾಯ ಸಂಪಾಜೆಯವರ ಗೌರವಾಧ್ಯಕ್ಷತೆಯಲ್ಲಿ 'ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ರಿ. ಪುತ್ತೂರು' ಎಂಬ ಸಂಸ್ಥೆಯನ್ನು ನಾಡಿನ ಸಮಸ್ತ ಯಕ್ಷಗಾನ ಅಭಿಮಾನಿಗಳ, ಪೋಷಕರ ಬೆಂಬಲದೊಂದಿಗೆ 2017ರಲ್ಲಿ ಸ್ಥಾಪಿಸಲಾಯಿತು. ತೆಂಕುತಿಟ್ಟು ಯಕ್ಷಗಾನವು ಅತ್ಯಂತ ಪ್ರಭಾವಿಯಾಗಿರುವ ಪುತ್ತೂರು, ಸುಳ್ಯ, ಕಾಸರಗೋಡು, ಕುಂಬಳೆ, ಮಂಗಳೂರು, ಉಡುಪಿ ಇತ್ಯಾದಿ ಪ್ರದೇಶಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಈ ಸಂಸ್ಥೆಯು ಪ್ರತಿ ವರ್ಷ ಬಣ್ಣದ ಮಹಾಲಿಂಗರ ಸಂಸ್ಮರಣೆ, ತೆಂಕುತಿಟ್ಟಿನ ಒರ್ವ ಪ್ರಸಿದ್ಧ ಕಲಾವಿದನಿಗೆ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿ ಪ್ರದಾನ, ಯಕ್ಷಗಾನದ ವಿವಿಧ ಆಯಾಮಗಳ ಕುರಿತಾದ ಪ್ರಾತ್ಯಕ್ಷಿಕೆ, ಕಮ್ಮಟ, ಬಣ್ಣಗಾರಿಕೆಗೆ ಸಂಬಂಧಿಸಿದ ಕಾರ್ಯಾಗಾರಗಳು, ಯಕ್ಷಗಾನ
ತರಬೇತಿ, ಬಣ್ಣದ ಮಹಾಲಿಂಗರಿಗೆ ಸಂಬಂಧಿಸಿದ ಎಲ್ಲಾ ಬಗೆಯ ದಾಖಲೆಗಳನ್ನು ಕ್ರೋಡೀಕರಿಸಿ ಶಾಶ್ವತವಾಗಿ ಪ್ರದರ್ಶಿಸುವ ವ್ಯವಸ್ಥೆ, ಅಸ್ವಸ್ಥ ಕಲಾವಿದರಿಗೆ ಸಹಾಯ ಮತ್ತು
ಪ್ರೋತ್ಸಾಹ, ಕಲಾವಿದರ ಮಕ್ಕಳಿಗೆ ಪ್ರೊತ್ಸಾಹ ಇತ್ಯಾದಿ ಹತ್ತು ಹಲವು ಉದ್ದೇಶಗಳನ್ನಿಟ್ಟುಕೊಂಡಿದೆ.
       2017ರ ಜುಲೈ 02 ರಂದು ಪುತ್ತೂರಿನಲ್ಲಿ  ಶ್ರೀ ಎಡನೀರು ಮಠಾಧೀಶರಾದ ಪರಮ ಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಯಕ್ಷಕಲಾ ಪೋಷಕರಾದ ಶ್ರೀ ಟಿ. ಶ್ಯಾಮ ಭಟ್ ರವರಿಂದ ಉದ್ಘಾಟಿಸಲ್ಪಟ್ಟ ಸಂಸ್ಥೆಯ ಮೂರನೆಯ ವರ್ಷದ ಕಾರ್ಯಕ್ರಮವು ಇಂದು ಅಪರಾಹ್ಣ 2. ರಿಂದ ಕಾಸರಗೊಡು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ನೆರವೇರಲಿರುವುದು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries