ಬದಿಯಡ್ಕ: ಸಂಪತ್ತು ಎಷ್ಟೇ ಇದ್ದರೂ ಪೂರ್ವ ಜನ್ಮದ ಪುಣ್ಯದ ಫಲವಿದ್ದರೆ ಮಾತ್ರ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿದೆ. ದೇವಸ್ಥಾನದ ಜೀರ್ಣೋದ್ಧಾರದಂತಹ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ನಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪಾವನರಾಗೋಣ ಎಂದು ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
ಗೋಸಾಡ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ಭಾನುವಾರ ಜರಗಿದ ವಿಶೇಷ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
40 ವರ್ಷಗಳ ಹಿಂದೆ ಶ್ರೀ ಕ್ಷೇತ್ರಕ್ಕೆ ವಾಹನ ಚಾಲಕನಾಗಿ ಮರವನ್ನು ತಂದ ತನ್ನ ಅನುಭವವನ್ನು ಹಂಚಿಕೊಂಡ ಅವರು ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಬೇಕಾದ ತರಕಾರಿಗಳನ್ನು ಊರಿನ ಎಲ್ಲರೂ ಸೇರಿ ಮಾಡಬೇಕೆಂದು ತೀರ್ಮಾನಿಸಿದ ಪ್ರಕಾರ ತರಕಾರಿ ಬೀಜವನ್ನು ಉದಯ ನಾ0iÀiï್ಕ ಕಾಯಿಮಲೆ ಅವರಿಗೆ ನೀಡಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವಕ್ಕೂ ಮೊದಲೇ ನಿರ್ಮಾಣಗೊಳ್ಳಬೇಕಿರುವ ಅನ್ನ ಛತ್ರ ಹಾಗೂ ಜೀರ್ಣೋದ್ಧಾರ ಕಾರ್ಯಗಳ ಧನಸಂಗ್ರಹಕ್ಕಾಗಿ ಹಮ್ಮಿಕೊಂಡ 1000 ರೂ ಮುಖಬೆಲೆಯ ಕೂಪನ್‍ಗಳನ್ನು ಗ್ರಾಮಕ್ಕೆ ಸಂಬಂಧಪಟ್ಟ ಮನೆಯ ಎಲ್ಲಾ ಸದಸ್ಯರೂ ಒಂದಕ್ಕೆ ಕಡಿಮೆಯಾಗದಂತೆ ಸ್ವೀಕರಿಸಬೇಕಾಗಿ ವಿನಂತಿಸಿದರು. ಮಧೂರು ವಾಸುದೇವ ಹೊಳ್ಳ ಅವರು ಲಕ್ಕಿ ಕೂಪನನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಮೊದಲ ಕೂಪನನ್ನು ಪಡೆದ ಮಂಗಳೂರು ಜಿಲ್ಲಾ ಪಂಚಾಯಿತಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಪುಷ್ಪಾ ಬಾಲಕೃಷ್ಣ ಮಣಿಯಾಣಿ ಮಾತನಾಡಿ ಈ ಊರಿಗೆ ನಲವತ್ತು ವರ್ಷಗಳ ಹಿಂದೆ ಸೊಸೆಯಾಗಿ ಬಂದಾಗ ಚಿಕ್ಕ ಒಂದು ದೇವಸ್ಥಾನ ಮಾತ್ರ ಇತ್ತು. ಆದರೆ ಇಂದು ಇಷ್ಟೊಂದು ಅಭಿವೃದ್ಧಿಯಾಗಿದ್ದು ಹೆಮ್ಮೆಯೆನಿಸುವುದಲ್ಲದೆ ಇಲ್ಲಿನ ಊರವರ ಶ್ರಮ ಶ್ಲಾಘನೀಯ ಎಂದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ವರದಿಯನ್ನು ವಾಚಿಸಿ ಇನ್ನು ನಡೆಯಬೇಕಾದ ಕಾಮಗಾರಿಗಳ ಬಗ್ಗೆ ವಿವರಿಸಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದು ತಿಳಿಸಿದರು,ಸಭಾ ಕಾರ್ಯಕ್ರಮದಲ್ಲಿ, ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೃಷ್ಣ ಅಮ್ಮಣ್ಣಾಯ ಪಾವೂರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ತಲೆಕ ಸುಬ್ರಹ್ಮಣ್ಯ ಭಟ್, ನ್ಯಾಯವಾದಿ ಪುರುಷೋತ್ತಮ ಭಟ್ ಮಠದ ಮೂಲೆ(ಮಂಗಳೂರು), ವಸಂತಿ ಟೀಚರ್ ಅಗಲ್ಪಾಡಿ, ಐತ್ತಪ್ಪ ಮವ್ವಾರು, ರಾಘವನ್ ಬೆಳ್ಳಿಗೆ, ವಿದೇಶದಲ್ಲಿನ ಉದ್ಯಮಿ ದಾಮೋದರ ಮಣಿಯಾಣಿ ಮಲ್ಲಮೂಲೆ, ಕ್ಷೇತ್ರದ ಸೇವಾ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ ಉಪಸ್ಥಿತರಿದ್ದು ಶುಭ ಹಾರೈಸಿದರು. ಕರ್ಕಾಟಕ ಮಾಸದಲ್ಲಿ ನಡೆದ ರಾಮಾಯಣ ಪ್ರವಚನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ಪುಟಾಣಿ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಕ್ಷೇತ್ರದ ಸೇವಾ ಸಮಿತಿಯ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡನಿರೂಪಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ನಾರಾಯಣ ಗೋಸಾಡ ಜೀರ್ಣೋದ್ಧಾರ ಕಾರ್ಯದ ಯಶಸ್ಸಿಗೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿ ಕೂಪನ್‍ಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ಜೊತೆಗೂಡಬೇಕು ಎಂದು ತಿಳಿಸಿ ಸ್ವಾಗತಿಸಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಸುಧಾಮ ಗೋಸಾಡ ವಂದಿಸಿದರು. ಊರಪರವೂರ ಹತ್ತುಸಮಸ್ತರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.