ಮುಳ್ಳೇರಿಯ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸಮಾಜಸೇವೆ ಹಾಗೂ ಸಮಾಜಕ್ಕಾಗಿ ಅವರು ನೀಡಿದ ಮಾರ್ಗದರ್ಶನ ಎಂದಿಗೂ ಅಜರಾಮರ. ಹಿಂದೆ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಸೇವನಾ ವಾರಾಚರಣೆಯನ್ನು ನಡೆಸಲಾಗುತ್ತಿತ್ತು. ಮಹಾತ್ಮರ ವ್ಯಕ್ತಿತ್ವವನ್ನು ಸ್ಮರಿಸಿಕೊಂಡು ಒಂದು ದಿವಸ ನಡೆಸುವ ಸೇವೆಯು ಸ್ಮರಣೀಯವೂ ಪ್ರಾಮಾಣಿಕತೆಯಿಂದಲೂ ಕೂಡಿರಬೇಕು ಎಂದು ಆದೂರು ಸಬ್ ಇನ್ಸ್‍ಪೆಕ್ಟರ್ ವಿಷ್ಣುಪ್ರಸಾದ್ ಅವರು ಹೇಳಿದರು.
ಅವರು ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ನೇತೃತ್ವದಲ್ಲಿ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ ನಡೆದ `ಗಾಂಧಿ ಸ್ಮೃತಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆಗಳಲ್ಲಿ ಸ್ಮರಣೀಯ ಸೇವೆಯಾಗಿದೆ ರಕ್ತದಾನ. 18 ವರ್ಷ ತುಂಬಿದ ಆರೋಗ್ಯವಂತರೆಲ್ಲರು ರಕ್ತದಾನವನ್ನು ಮಾಡಬಹುದು. ರಕ್ತದಾನದ ಪ್ರಯೋಜನವನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಶಾಲಾ ರಕ್ಷಕ ಶೀಕ್ಷಕ ಸಂಘದ ಅಧ್ಯಕ್ಷ ಬಿ.ಅಬ್ದುಲ್ ಗಫೂರ್ ಅವರು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಮಸೂದ್ ಬೋವಿಕ್ಕಾನ, ಮಾತೃಸಂಘದ ಅಧ್ಯಕ್ಷೆ ಸುಹ್ರಾ, ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷನ್ ನಂಬಿಯಾರ್, ಪಿ.ಎ.ಸಿ. ಮೆಂಬರ್ ಮಣಿಕಂಠನ್ ಎಂ. ಶುಭಾಶಂಸನೆಗೈದರು. ಪ್ರೀತಮ್ ಎ.ಕೆ. ಸ್ವಾಗತಿಸಿ, ಮಿಥುನಾ ಲೋಹಿ ವಂದಿಸಿದರು. ಕಾರ್ಯಕ್ರಮದ ಬಳಿಕ ಪರಿಸರ ಶುಚೀಕರಣ ಕಾರ್ಯಕ್ರಮ ನಡೆಯಿತು.