ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಂಗಳವಾರ ಪ್ರಾತ:ಕಾಲ ಶರನ್ನವರಾತ್ರಿ ವಿಜಯದಶಮಿ ಅಂಗವಾಗಿ ಗಾಯತ್ರೀ ಮಾತೆಗೆ ಸೀಯಾಳಾಭಿಷೇಕ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ವೇದಮೂರ್ತಿ ಹರಿನಾರಾಯಣ ಮಯ್ಯರ ಪೌರೋಹಿತ್ಯದಲ್ಲಿ ನಡೆಯಿತು. ಬೆಳಿಗ್ಗೆ ಪೂಜೆಯ ಬಳಿಕ ತೆನೆ ತುಂಬಿಸುವುದು, ವಿದ್ಯಾರಂಭ ಮತ್ತು ಶಾರದಾ ಪೂಜೆ ನಡೆಯಿತು.
ಬೆಳಿಗ್ಗೆ 10. ರಿಂದ ಕು.ಗಾಯತ್ರೀ ಮತ್ತು ಕು.ಶ್ರಾವಣ್ಯ ಕೊಂಡೆವೂರು ಇವರಿಂದ ಭಕ್ತಿಸಂಗೀತ, ನಂತರ ಕುಂಬಳೆಯ ವಿದುಷಿ ಚಿತ್ತರಂಜಿನಿಯವರ ಶಾಸ್ತ್ರೀಯ ಸಂಗೀತದ ಜೊತೆ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅನಿಲ್ ಕೃಷ್ಣ ಕುಂಬಳೆ ವಯಲಿನ್ ನಲ್ಲಿ ಮತ್ತು ವಸಂತಕೃಷ್ಣ ಕಾಂಚನ ಮೃದಂಗದಲ್ಲಿ ಸಹಕರಿಸಿದರು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಆಶ್ರಮದ ಪುಷ್ಕರಣಿಯಲ್ಲಿ ಶ್ರೀಶಾರದಾಮಾತೆಯ ಜಲ ಸ್ತಂಭನ ನಡೆಯಿತು. ಯೋಗಾನಂದ ಸರಸ್ವತೀ ಶ್ರೀಗಳು ಭಕ್ತಾದಿಗಳಿಗೆ ಮಹಾಮಂತ್ರಾಕ್ಷತೆ ಅನುಗ್ರಹಿಸುವುದರೊಂದಿಗೆ ಶರನ್ನವರಾತ್ರಿ ಉತ್ಸವ ಸಂಪನ್ನಗೊಂಡಿತು.