ಬದಿಯಡ್ಕ: ಪುತ್ತೂರಿನ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಮೂರನೆಯ ವರ್ಷದ ಕಾರ್ಯಕ್ರಮ ಇಂದು ಅಪರಾಹ್ನ 2 ರಿಂದ ನೀರ್ಚಾಲಿನ ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಅಪರಾಹ್ನ 2 ರಿಂದ ಶೂರ್ಪನಖಾ - ಖರಾಸುರ ಪ್ರಸಂಗದ ಯಕ್ಷಗಾನ ಬಯಲಾಟದೊಂದಿಗೆ ಕಾರ್ಯಕ್ರಮ ಆರಂಭವಾಗುವುದು. ಸಂಜೆ 5 ರಿಂದ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದರೂ, ಬಣ್ಣದ ಮಹಾಲಿಂಗರ ಒಡನಾಡಿಗಳೂ ಆದ ಡಾ.ಕೋಳ್ಯೂರು ರಾಮಚಂದ್ರ ರಾವ್ ಉದ್ಘಾಟಿಸುವರು. ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರೂ ಹಿರಿಯ ಸಾಹಿತಿಗಳೂ ಆದ ಡಾ.ಚಂದ್ರಶೇಖರ ದಾಮ್ಲೆಯವರು ಬಣ್ಣದ ಮಹಾಲಿಂಗರವರ ಸಂಸ್ಮರಣೆಯನ್ನು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಎನ್.ಕೃಷ್ಣ ಭಟ್ ಮತ್ತು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ವಿದ್ಯಾಸಂಸ್ಥೆಯ ಮೇನೇಜರ್ ಜಯದೇವ ಖಂಡಿಗೆಯವರು ಭಾಗವಹಿಸಲಿದ್ದಾರೆ. ಪ್ರಸ್ತುತ ಸಮಾರಂಭದಲ್ಲಿ ಬಣ್ಣದ ಮಹಾಲಿಂಗ ಯಕ್ಷ ಪ್ರಶಸ್ತಿಯನ್ನು ತೆಂಕುತಿಟ್ಟಿನ ಸುಪ್ರಸಿದ್ಧ ಹಿರಿಯ ಬಣ್ಣದ ವೇಷಧಾರಿಗಳಾದ ಮರ್ಕಂಜ ಬೊಮ್ಮಾರು ಐತಪ್ಪ ಗೌಡರಿಗೆ ಪ್ರದಾನ ಮಾಡಲಾಗುವುದು.
ರಾಷ್ಟ್ರೀಯ ರಂಗ ಪ್ರಶಸ್ತಿ ವಿಜೇತ ರಂಗನಿರ್ದೇಶಕ, ರಂಗ ಮಾಂತ್ರಿಕ ಜೀವನ್ ರಾಮ್ ಸುಳ್ಯ ಅವರಿಗೆ ಬಣ್ಣದ ಮಹಾಲಿಂಗರ ಶಾಶ್ವತ ನೆನಪನ್ನು ಉಳಿಸುವಲ್ಲಿ ಸಹಕರಿಸಿದ ಮಹಾನುಭಾವರಿಗೆ ನೀಡುವ ಬಣ್ಣದ ಮಹಾಲಿಂಗ ಸ್ಮೃತಿ ಪುರಸ್ಕಾರವನ್ನು ನೀಡಲಾಗುವುದು. ಇದೇ ಸಂದರ್ಭದಲ್ಲಿ ತೆಂಕುತಿಟ್ಟಿನ ಹಿರಿಯ ನಿವೃತ್ತ ಕಲಾವಿದರಾದ ಸರಾವು ತೇರಪ್ಪ ಪಾಟಾಳಿ ಅವರನ್ನು ಸಮ್ಮಾನಿಸಲಾಗುವುದು. ಕುಂಬಳೆ ಉಪಜಿಲ್ಲಾ ವಿದ್ಯಾ„ಕಾರಿಗಳು ಮತ್ತು ಯಕ್ಷಗಾನ, ನಾಟಕ ಕಲಾವಿದರಾದ ಯತೀಶ್ ಕುಮಾರ್ ರೈ ಅವರು ಅಭಿನಂದನಾ ಭಾಷಣವನ್ನು ಮಾಡುವರು.
ಪ್ರತಿಷ್ಠಾನದ ಗೌರವಾಧ್ಯಕ್ಷರುಗಳಾದ ಸುಬ್ರಾಯ ಸಂಪಾಜೆ ಮತ್ತು ನಿವೃತ್ತ ಉಪ ತಹಶೀಲ್ದಾರ್ ಮಹಾಲಿಂಗ ಮಂಗಳೂರು ಉಪಸ್ಥಿತರಿರುವರು. ಸಂಜೆ 6.30 ರಿಂದ ಪರಂಪರೆಯ ಮೇಳೈಸುವಿಕೆಯೊಂದಿಗೆ ತೆಂಕುತಿಟ್ಟು ಯಕ್ಷ ಪರಂಪರೆಯ ಹರಿಕಾರರಾದ ಬಲಿಪ ಪ್ರಸಾದ ಮತ್ತು ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಾರಥ್ಯದಲ್ಲಿ ಸುಪ್ರಸಿದ್ಧ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರ ಕೂಡುವಿಕೆಯಿಂದ ಮಹಿರಾವಣ ಕಾಳಗ ಯಕ್ಷಗಾನ ಬಯಲಾಟವು ನಡೆಯಲಿದೆ. ಯಕ್ಷಗಾನದ ಬಣ್ಣದ ವೇಷ ಮತ್ತು ಪರಂಪರೆಗೆ ಹೆಚ್ಚಿನ ಒತ್ತು ಕೊಟ್ಟು ಆಯೋಜಿಸಲಾದ ಈ ಕಾರ್ಯಕ್ರಮಗಳು ಅನೇಕ ಪ್ರತ್ಯೇಕತೆಗಳೊಂದಿಗೆ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ, ಬಣ್ಣದ ಮಹಾಲಿಂಗರ ವ್ಯಕ್ತಿತ್ವದ ಅನಾವರಣಕ್ಕೆ ಪೂರಕವಾಗಿ ನಡೆಯಲಿವೆ. ಆ ಮೂಲಕ ಯಕ್ಷರಂಗದ ದಿಗ್ಗಜರೊಬ್ಬರ ಔಚಿತ್ಯಪೂರ್ಣ ಸಂಸ್ಮರಣೆಯು ನಡೆಯಲಿದೆ.