ಬದಿಯಡ್ಕ: ಶಬರಿಮಲೆಯು ಆಸ್ತಿಕ ಜನರ ಶ್ರದ್ಧಾಕೇಂದ್ರವಾಗಿದೆ. ಹಿಂದೂ ಕ್ಷೇತ್ರಗಳ ಹಾಗೂ ಸನಾತನ ಭಾರತೀಯ ಸಂಸ್ಕøತಿಯ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿದ್ದು, ಇದರ ವಿರುದ್ಧ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ. ನಮ್ಮತನವನ್ನು ಉಳಿಸಿಕೊಳ್ಳಲು ನಾವು ಕಟಿಬದ್ಧರಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ರೂಪವಾಣಿ ಆರ್. ಭಟ್ ಹೇಳಿದರು.
ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರಕ್ಕೆ ಆಗಮಿಸಿದ ಶ್ರೀ ಅಯ್ಯಪ್ಪ ಧರ್ಮಪ್ರಚಾರ ರಥಯಾತ್ರೆಯ ಸಂದರ್ಭದಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಸೇರಿದ ಅಯ್ಯಪ್ಪ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಧಾರ್ಮಿಕ ವಿಚಾರಗಳ ಅನುಷ್ಠಾನದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಮೊದಲು ನಮ್ಮಲ್ಲೇ ಪ್ರಶ್ನಿಸುವ ಅಗತ್ಯತೆಯಿದೆ. ಹಿರಿಯರು ಆಚರಿಸಿಕೊಂಡು ಬಂದಂತಹ ಸಂಪ್ರದಾಯಗಳನ್ನು ಬದಿಗೊತ್ತಿ ಇಂದು ಆಧುನಿಕತೆಯತ್ತ ಮುಖಮಾಡುತ್ತಿರುವುದು ನಮ್ಮ ಸಮಾಜಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ನಮ್ಮ ಮನೆಯ ಹೆಣ್ಣು ಮಕ್ಕಳನ್ನು ದಾರಿತಪ್ಪಿಸಿ ಅನ್ಯಮತದತ್ತ ಸೆಳೆಯಲು ವ್ಯವಸ್ಥಿತ ಜಾಲ ಸಕ್ರಿಯವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇತರರ ಮೋಹದ ಪಾಶಕ್ಕೆ ಸಿಲುಕದಂತೆ ಜಾಗೃತರಾಗಿರಬೇಕು. ನಮ್ಮ ಸನಾತನ ಸಂಸ್ಕøತಿಯ ನೆರಳಿನಲ್ಲಿ ಕುಟುಂಬ ಜೀವನವನ್ನು ಮುನ್ನಡೆಸಿದರೆ ನಮ್ಮ ಸಹೋದರಿ ನಮ್ಮವಳಾಗಿಯೇ ಇರುತ್ತಾಳೆ. ಈ ನಿಟ್ಟಿನಲ್ಲಿ ಪ್ರತೀ ಮನೆಗಳಲ್ಲಿ ನಿತ್ಯಭಜನೆ, ಸ್ತೋತ್ರ ಪಠಣ ನಡೆಯುತ್ತಿರಬೇಕು. ಆಧುನಿಕತೆಯ ಸೋಗಿನಲ್ಲಿ ನಮ್ಮತನವನ್ನು ಮರೆಯಬಾರದು. ಕ್ಷೇತ್ರಗಳ ದರ್ಶನ, ಸನ್ಮಾರ್ಗದಲ್ಲಿ ನಡೆಯುವುದು ಮೊದಲಾದ ಚಟುವಟಿಕೆಗಳು ನಮ್ಮನ್ನು ಧಾರ್ಮಿಕತೆಯತ್ತ ಕೊಂಡೊಯ್ಯುತ್ತದೆ. ಪ್ರತೀ ಮನೆಯ ಹಿರಿಯರು ಕಿರಿಯರಿಗೆ ಮಾರ್ಗದರ್ಶನವನ್ನು ನೀಡಿ ನಮ್ಮ ಸಂಸ್ಕøತಿ, ಕ್ಷೇತ್ರಗಳನ್ನು ಉಳಿಸುವಲ್ಲಿ ಪ್ರಧಾನ ಪಾತ್ರವಹಿಸಬೇಕು ಎಂದು ಅವರು ತಿಳಿಸಿದರು.
ಶ್ರೀಮಂದಿರದ ಗೌರವಾಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮಂದಿರದ ಗುರುಸ್ವಾಮಿ ರಮೇಶ ನೀರ್ಚಾಲು, ಶ್ರೀ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಯ ಕಾಸರಗೋಡು ಜಿಲ್ಲಾ ಸ್ವಾಗತ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಮಂಜೇಶ್ವರ ತಾಲೂಕು ಸಮಿತಿ ಅಧ್ಯಕ್ಷ ರಾಮ ಪಾಟಾಳಿ, ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ಸುರೇಶ್ ಶುಭಾಶಂಸನೆಗೈದರು. ರವಿ ಮಾಸ್ತರ್ ನೀರ್ಚಾಲು ಸ್ವಾಗತಿಸಿ, ಬಾಲಕೃಷ್ಣ ನೀರ್ಚಾಲು ವಂದಿಸಿದರು. ಗುರುಸ್ವಾಮಿ ರವೀಂದ್ರನಾಥ ಶೆಟ್ಟಿ ವಳಮಲೆ, ಗಂಗಾಧರ ಓಣಿಯಡ್ಕ ಹಾಗೂ ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.
ರಥಯಾತ್ರೆಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ನೂರಾರು ಭಕ್ತಾದಿಗಳು ಸೇವೆಯನ್ನು ಮಾಡಿಸಿ ಅಯ್ಯಪ್ಪ ಜ್ಯೋತಿ ದರ್ಶನಗೈದರು.