HEALTH TIPS

ಗಾನಕೋಗಿಲೆ ದಿನೇಶ ಅಮ್ಮಣ್ಣಾಯರಿಗೆ ಷಷ್ಟ್ಯಬ್ದಿ ಅಭಿನಂದನಾ ಸಮಾರಂಭ-ಕಲೆ, ಕಲಾಸ್ವಾದಕ ಹಾಗೂ ಪೋಷಕರೊಂದಿಗೆ ಅಮ್ಮಣ್ಣಾಯರ ನಿಕಟತೆ ಮತ್ತು ಅಪಾರ ಜ್ಞಾನ ಮೆಚ್ಚುಗೆಗೆ ಕಾರಣ-ಎಡನೀರು ಶ್ರೀಗಳು


           ಕಾಸರಗೋಡು: ಪಾತ್ರಗಳೊಂದಿಗೆ ಅನುಸಂಧಾನಗೊಂಡು ಭಾವದೊಳಗೆ ಹುಟ್ಟಿ ತಟ್ಟುವ ಭಾವನೆಗಳೊಂದಿಗೆ ಪ್ರಸಂಗಗಳನ್ನು ಮುನ್ನಡೆಸುವವನು ಭಾಗವತನಾಗಿರುತ್ತಾನೆ. ಶುದ್ದ ಪಾರಂಪರಿಕ ರಾಗಗಳನ್ನು ಭಾವಶುದ್ದಿಯೊಂದಿಗೆ ಪ್ರಸ್ತುತಪಡಿಸುವ ಭಾಗವತರಾದ ದಿನೇಶ ಅಮ್ಮಣ್ಣಾಯರ ಕಲಾ ಪ್ರೇಮ, ನೈಪುಣ್ಯಗಳು ಅವರ ಜ್ಞಾನ ವಿಸ್ತಾರದ ಪ್ರತೀಕ ಎಂದು ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕಾಶವಾನಂದ ಭಾರತಿ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
        ಶ್ರೀಮದ್ ಎಡನೀರು ಮಠದಲ್ಲಿ ಬುಧವಾರ ರಾತ್ರಿ ಆಯೋಜಿಸಲಾಗಿದ್ದ ಗಾನಕೋಗಿಲೆ ದಿನೇಶ್ ಅಮ್ಮಣ್ಣಾಯರ ಷಷ್ಟ್ಯಬ್ದಿ ಅಭಿನಂದನಾ ಸಮಾರಂಭದಲ್ಲಿ ದಿವ್ಯ ಉಪಸ್ಥಿತರಿದ್ದು ಅನುಗ್ರಹ ಭಾಷಣಗೈದು ಅವರು ಮಾತನಾಡಿದರು.
       ಕಳೆದ ಒಂದೂವರೆ ದಶಕಗಳಿಂದ ಶ್ರೀಎಡನೀರು ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೇಳದ ಯಶಸ್ಸಿಗೆ ಅಮ್ಮಣ್ಣಾಯರ ಅಪರಿಮಿತ ಕೊಡುಗೆ ಮಹತ್ತರವಾದುದು. ಕಲೆ, ಕಲಾವಿದರು, ಕಲಾ ಪೋಷಕರು ಮತ್ತು ಕಲಾಸ್ವಾದಕರೊಂದಿಗೆ ನಿಕಟರಾಗಿ ಪರಂಪರೆಗೆ ಧಕ್ಕೆಯಾಗದಂತೆ ಪ್ರಸಂಗಗಳನ್ನು ನಿರ್ದೇಶಿಸುವಲ್ಲಿ ಅಮ್ಮಣ್ಣಾಯರು ವಿಶೇಷ ಅನುಭವ ಹೊಂದಿದವರಾಗಿರುವರೆಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದರು. ಹಿರಿಯ ಕಲಾ ಪೋಷಕ, ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಟಿ.ಶಾಮ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಅಮ್ಮಣ್ಣಾಯರ ಕಲಾ ಸೇವೆಯ ಔನ್ನತ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಹಿರಿಯ ವಿದ್ವಾಂಸ ಪಂಜ ಭಾಸ್ಕರ ಭಟ್ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಕಟೀಲು ಮೇಳಗಳ ವ್ಯವಸ್ಥಾಪಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಗೌರವ ಉಪಸ್ಥಿತರಿದ್ದು ಮಾತನಾಡಿದರು. ಕಲಾವಿದ, ಪತ್ರಕರ್ತ ನಾ.ಕಾರಂತ ಪೆರಾಜೆ ಅಭಿನಂದನಾ ಭಾಷಣಗೈದು ಮಾತನಾಡಿದರು. ವಿದ್ವಾನ್ ವಿ.ಬಿ.ಹಿರಣ್ಯ ಅಭಿನಂದನಾ ಪತ್ರ ವಾಚಿಸಿದರು. ದಿನೇಶ ಅಮ್ಮಣ್ಣಾಯ ದಂಪತಿಗಳನ್ನು ವೇದಿಕೆಯಲ್ಲಿ ಅಭಿನಂದಿಸಿ ಗೌರವಿಸಲಾಯಿತು.
       ಈ ಸಂದರ್ಭ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಭಾಗವತ ದಿನೇಶ ಅಮ್ಮಣ್ಣಾಯ ಅವರು, ತನ್ನ ಕಲಾ ಸೇವೆಯ ಸಾಧನೆಗೆ ಸ್ವಗೃಹ, ಎಡನೀರು ಶ್ರೀಮಠ ಹಾಗೂ ಕಲಾಪ್ರೇಮಿಗಳೆಂಬ ಮೂರು ಮಜಲುಗಳ ನಿರಂತರ ಸಹಕಾರ, ಆಶೀರ್ವಾದಗಳೇ ಮೂಲ ಕಾರಣವಾಗಿದೆ. ವ್ಯಕ್ತಿ, ಸಮಾಜ, ರಾಷ್ಟ್ರ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಯಕ್ಷಗಾನ ಕಲೆಯು ಅಧಮ್ಯ ಶಕ್ತಿಯಾಗಿದೆ. ಈ ಕಲಾ ಪ್ರಕಾರದಲ್ಲಿ ಸೇವೆಗೈಯ್ಯುವ ಅವಕಾಶ ಲಭ್ಯವಾಗಿರುವುದು ಶ್ರೀಮಠದ ಅನುಗ್ರಹ, ಕಲಾಪ್ರೇಮಿಗಳ ಸದಾಶಯಗಳಿಂದ ಎಂದು ತಿಳಿಸಿದರು.
       ಶ್ರೀಮಠದ ಪ್ರಬಂಧಕ ನ್ಯಾಯವಾದಿ ಐ.ವಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಂದ್ರ ಕಲ್ಲೂರಾಯ ಎಡನೀರು ವಂದಿಸಿದರು. ಕೆಯ್ಯೂರು ನಾರಾಯಣ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳ, ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ, ಬಲಿಪ ಪ್ರಸಾದ ಭಟ್, ಹೊಸಮೂಲೆ ಗಣೇಶ ಭಟ್ ಅವರ ಸಹಭಾಗಿತ್ವದಲ್ಲಿ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಂಜೆ 4.30 ರಿಂದ ಬಡಗು ತಿಟ್ಟು ಖ್ಯಾತಿಯ ರಾಘವೇಂದ್ರ ಮಯ್ಯ ಹಾಗೂ ದಿನೇಶ ಅಮ್ಮಣ್ಣಾಯ ಅವರಿಂದ ಗಾನವೈಭವ ಪ್ರಸ್ತುತಗೊಂಡಿತು. ಮಧ್ಯಾಹ್ನ ವಿವಿಧ ವೈದಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries