ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಕ್ಕಳ ಪೂಜೆಯ ಪ್ರಯುಕ್ತ ಪದ್ಮಶ್ರೀ ಪಂಡಿತ್ ಅಜಯ ಚಕ್ರವರ್ತಿ ಕೋಲ್ಕತ್ತಾ ಅವರ ಶಿಷ್ಯ ಗುರುದತ್ತ ಅಗ್ರಹಾರ ಇವರಿಂದ ಹಿಂದೂಸ್ತಾನಿ ಭಜನಾ ಸಂಧ್ಯಾ ಕಾರ್ಯಕ್ರಮವು ಅ. 05 ರಂದು ಶನಿವಾರ ಸಂಜೆ 6. ರಿಂದ ಜರಗಲಿದೆ. ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕಣಿಪುರ ಶ್ರೀಗೋಪಾಲಕೃಷ್ಣ ಭಜನಾ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪರಿಚಯ:
ಗುರುದತ್ತ ಕಾಮತ್ ಅವರು ಮೈಸೂರು ಅರಮನೆಯ ಆಸ್ಥಾನ ಸಂಗೀತ ಕಲಾವಿದರ ಪರಂಪರೆಯವರಾಗಿದ್ದು, ಆರಂಭಿಕ ಶಿಕ್ಷಣವನ್ನು ತಮ್ಮ ನಾಲ್ಕರ ಹರೆಯದಲ್ಲಿ ತಾಯಿ ಸಿ.ಎನ್ ಅನ್ನಪೂರ್ಣ ಅವರಿಂದ ಅಭ್ಯಸಿಸಿದರು.ಬಳಿಕ ಚಿಕ್ಕಪ್ಪ ಎ.ಕೆ.ವಿಶ್ವನಾಥ್ ಅವರಿಂದ ಕೊಳಲು-ಸಂಗೀತ ಅಭ್ಯಾಸ ಮುಂದುವರಿಸಿದರು. ಹಿಂದೂಸ್ಥಾನಿ ಸಂಗೀತ ವಿಶಾರದೆ ಗೀತಾ ಭಟ್ ಧಾರವಾಡ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಅಧಿಕೃತವಾಗಿ ಅಭ್ಯಾಸ ಮಾಡಿರುವರು. ಬಳಿಕ ಕೋಲ್ಕತ್ತಾದ ಪದ್ಮಶ್ರೀ ಪಂಡಿತ್ ಅಜಯ ಚಕ್ರವರ್ತಿಯವರಿಂದ ಹೆಚ್ಚಿನ ಶಿಕ್ಷಣವನ್ನು ಪಡೆದು ಖ್ಯಾತರಾಗಿರುವರು. ಕೊಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರತರಾಗಿರುವ ಇವರು, ಬೆಂಗಳೂರು, ಮಂಗಳೂರಿನಲ್ಲಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನಡೆಸಿದವರಾಗಿದ್ದಾರೆ. ಖಯಾಲ್, ತುಮ್ರಿ, ಮರಾಠಿ ಅಭಾಂಗ್,ಕನ್ನಡ ದಾಸರ ಪದಗಳು, ತುಳಸೀದಾಸರ ಹಲವು ಹಿಂದೀ ರಚನೆಗಳಲ್ಲಿ ಮತ್ತು ಬಂಗಾಳಿ ರವೀಂದ್ರ ಸಂಗೀತ ಪರಂಪರೆಯಲ್ಲಿ ವಿಶೇಷ ಕೊಡುಗೆಗಳ ಮೂಲಕ ಗುರುದತ್ತ ಅಗ್ರಹಾರ ಪ್ರಸಿದ್ದರಾಗಿದ್ದಾರೆ.