ಮಂಜೇಶ್ವರ: ಕನ್ನಡ ಭಾಷೆ, ಸಂಸ್ಕøಯ ನೆಲೆಬೀಡಾದ ಮಂಜೇಶ್ವರದಲ್ಲಿ ಕನ್ನಡಿಗರ ಸಾಂವಿಧಾನಿಕ ಮಾನ್ಯತೆಯಲ್ಲಿ ಪಡೆಯುವ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಗಳು ನಡೆಯುತ್ತಲೇ ಇವೆ. ಕಾಸರಗೋಡಿನ ಶಿಕ್ಷಣ ಕೇಂದ್ರಗಳಲ್ಲಿ ಕನ್ನಡಿಗರಿಗೆ ಮೀಸಲಾಗಿರುವ ಹುದ್ದೆಗಳಲ್ಲಿ ಕನ್ನಡೇತರರನ್ನು ನೇಮಿಸುವುದರ ಮೂಲಕ ಶಾಲಾ ಮಕ್ಕಳಿಗೆ, ಅಧ್ಯಾಪಕರಿಗೆ ಹಾಗೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ.
ಕನ್ನಡ ಪ್ರದೇಶವಾದ ಮಂಜೇಶ್ವರದ ಬ್ಲಾಕ್ ಸಂಪನ್ಮೂಲ ಕೇಂದ್ರ(ಬಿ. ಆರ್. ಸಿ) ದಲ್ಲಿ ಕನ್ನಡೇತರ ಅಧಿಕಾರಿಯ ನೇಮಕಾತಿಯನ್ನು ನಡೆಸುವುದರ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ, ಬಳಿಕ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ನಿರಂತರ ಪ್ರಯತ್ನ ಹಾಗೂ ಹೋರಾಟದ ಫಲವಾಗಿ ಇದೀಗ ಕನ್ನಡೇತರ ಅಧಿಕಾರಿಯ ನೇಮಕಾತಿಯನ್ನು ರದ್ದುಗೊಳಿಸುವುದರೊಂದಿಗೆ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ.
ಮಂಜೇಶ್ವರದ ಬಿ. ಆರ್. ಸಿ ಯಲ್ಲಿ ಈ ಹಿಂದೆ ಕನ್ನಡ ಪ್ರಭಾರ ಕ್ಷೇತ್ರ ನಿರೂಪಣಾಧಿಕಾರಿಯಾಗಿದ್ದ ವಿಜಯಕುಮಾರ್ ಪಿ ರವರು ಕಾರ್ಯನಿರ್ವಹಿಸುತ್ತಿದ್ದಾಗ ಶೇಕಡಾ 90 ಕ್ಕಿಂತಲೂ ಅಧಿಕ ಕನ್ನಡ ಶಾಲೆಗಳನ್ನೊಳಗೊಂಡ ಮಂಜೇಶ್ವರದಲ್ಲಿ ಕನ್ನಡದಲ್ಲಿ ವ್ಯವಹರಿಸಲು ಸುಲಭವಾಗುತ್ತಿತ್ತು. ಆದರೆ ತಮ್ಮ ಕ್ಷೇತ್ರ ನಿರೂಪಣಾಧಿಕಾರಿಯ ಸೇವಾವಧಿ ಕೊನೆಗೊಂಡು ತವರು ಶಾಲೆಗೆ ವರ್ಗಾವಣೆಯಾದಾಗ ವರ್ಗಾವಣೆಗೊಂಡ ದಿನವೇ ಕನ್ನಡೇತರ ಅಧಿಕಾರಿಯ ನೇಮಕಾತಿ ಹಾಗೂ ಅಧಿಕಾರ ಪಡೆದಾಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. ಈ ನಿಟ್ಟಿನಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ನಿರಂತರ ಮೇಲಾಧಿಕಾರಿಗಳನ್ನು ಸಂಪರ್ಕಿಸಿ, ಮನವಿಗಳನ್ನು ಸಲ್ಲಿಸಿ ನೇಮಕಾತಿ ಆದೇಶವನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಗುವ ಮೂಲಕ ಕನ್ನಡಿಗರಿಗಾಗುವ ಅನ್ಯಾಯವನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿ ವರ್ಗ ಹಾಗೂ ಆಡಳಿತ ವರ್ಗಕ್ಕೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಅಭಿನಂದನೆಗಳನ್ನು ಸಲ್ಲಿಸಿದೆ.