ಶ್ರೀನಗರ: ಇನ್ನು ಮುಂದೆ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಇಲ್ಲ. ನಿನ್ನೆ ಮಧ್ಯರಾತ್ರಿಗೆ ಅದು ಮುಕ್ತಾಯವಾಗಿದ್ದು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಬದಲಾಗಿದೆ.
ಕಳೆದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ತೆಗೆದುಹಾಕಿದ 86 ದಿನಗಳ ನಂತರ ರಾಜ್ಯದ ಸ್ಥಾನಮಾನ ಕಳೆದುಕೊಂಡಿದೆ.ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಕೇಂದ್ರಾಡಳಿತ ಪ್ರದೇಶಗಳನ್ನು ಲೆಫ್ಟಿನೆಂಟ್ ಗವರ್ನರ್ ಗಳಾದ ಜಿಸಿ ಮುರ್ಮು ಮತ್ತು ಆರ್ ಕೆ ಮಾಥುರ್ ನೋಡಿಕೊಳ್ಳಲಿದ್ದಾರೆ. ಅವರು ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯವೊಂದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಬದಲಾಯಿಸಲಾಗಿದೆ. ಈ ಮೂಲಕ ಇಂದಿನಿಂದ ಭಾರತದಲ್ಲಿ ಒಟ್ಟು ರಾಜ್ಯಗಳ ಸಂಖ್ಯೆ 28 ಆಗಲಿವೆ ಹಾಗೂ ಕೇಂದ್ರಾಡಳಿತ ಪ್ರದೇಶಗಳು 9 ಆಗಲಿವೆ.
ಇಂದು ಲೆಫ್ಟಿನೆಂಟ್ ಲಾಥೂರ್ ಅವರು ಲೇಹ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಲೆಫ್ಟಿನೆಂಟ್ ಗವರ್ನರ್ ಮುರ್ಮು ಶ್ರೀನಗರದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೀಗಾಗಿ ಇಂದಿನಿಂದ ಜಮ್ಮು-ಕಾಶ್ಮೀರದ ಸಂವಿಧಾನ ಮತ್ತು ರಂಬೀರ್ ದಂಡ ಸಂಹಿತೆ ರದ್ದಾಗಲಿದೆ. ಕೇಂದ್ರ ಸರ್ಕಾರ ಇಂದಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ, ಪೊಲೀಸರ ಮೇಲೆ ನೇರ ನಿಯಂತ್ರಣ ಇಟ್ಟುಕೊಳ್ಳುತ್ತದೆ. ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ ಕಾಯ್ದೆ 2019ರ ಪ್ರಕಾರ, ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಚುನಾಯಿತ ಪ್ರತಿನಿಧಿಗಳ ಕೈಯಲ್ಲಿ ಭೂಮಿಯ ಮೇಲೆ ಹಕ್ಕು ಇರುತ್ತದೆ. ದೆಹಲಿಯಲ್ಲಾದರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ(ಡಿಡಿಎ)ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಹೊಂದಿರುತ್ತಾರೆ.
ಸರ್ದಾರ್ ವಲ್ಲಭಬಾಯಿ ಪಟೇಲ್ ಜಯಂತಿ: ದೇಶದ ಮೊದಲ ಉಪ ಪ್ರಧಾನಿ ಮತ್ತು ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ದೇಶ ರಾಷ್ಟ್ರೀಯ ಏಕತಾ ದಿವಸ ಆಚರಿಸುತ್ತಿರುವ ಹೊತ್ತಿನಲ್ಲಿ ಕೇಂದ್ರ ಸರ್ಕಾರ ಈ ಮೂಲಕ ಅವರಿಗೆ ಗೌರವ ತೋರಿಸಿದಂತಾಗುತ್ತದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು 560ಕ್ಕೂ ಹೆಚ್ಚು ರಾಜ್ಯಗಳನ್ನು ಒಟ್ಟು ಸೇರಿಸಿ ಯೂನಿಯನ್ ಆಫ್ ಇಂಡಿಯಾ ಎಂದು ಮಾಡಿದ್ದರು.