ಕಾಸರಗೋಡು: ಕಂದಾಯ ವಿಭಾಗ ವ್ಯಾಪ್ತಿಯಲ್ಲಿ ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಣೆ ನಿಯಂತ್ರಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ದಳದ ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ. ಕಾಸರಗೋಡು ತಾಲೂಕಿನ ತಳಂಗರೆ, ಬಾಂಗೋಡು, ಪೆರುಂಬಳ ಬಳಿಯ ತುರ್ತಿ, ಮುಳಿಯಾರು ಗ್ರಾಮದಮುಂಡಂಕೈ ಪ್ರದೇಶಗಳಲ್ಲಿ ಅಕ್ರಮವಾಗಿ ಹೇರಲಾಗಿದ್ದ ಹತ್ತು ಲೋಡ್ ಹೂಳೆತ್ತಿದ ಮರಳನ್ನು ವಶಪಡಿಸಿ, ಮರಳಿ ಹೊಳೆಗೆ ತಂದು ಸುರಿಯಲಾಗಿದೆ. ಕಾಸರಗೋಡು ವಲಯಕಂದಾಯಾಧಿಕಾರಿ ಕೆ.ರವಿಕುಮಾರ್ ಅವರ ಆದೇಶ ಪ್ರಕಾರ ತಾಲೂಕು ಮಟ್ಟದ ದಳ ಈ ಕ್ರಮ ಕೈಗೊಂಡಿದೆ. ಅಕ್ರಮ ಮರಳು ಸಾಗಣೆ ನಡೆಸುತ್ತಿದ್ದ ಲಾರಿಯೊಂದನ್ನು ಮಂಜೇಶ್ವರದಲ್ಲಿ ವಶಪಡಿಸಲಾಗಿದೆ.
ಅಕ್ರಮವಾಗಿ ಮರಳು ಹೂಳೆತ್ತುವುದು, ಕರ್ಗಲ್ಲ ಕೋರೆ ನಡೆಸುವುದು ನಿಯಂತ್ರಿಸುವ ನಿಟ್ಟಿನಲ್ಲಿ ಕಾಸರಗೋಡು ಆರ್.ಡಿ.ಒ. ಅವರ ಆದೇಶ ಪ್ರಕಾರ 24 ತಾಸೂ ಚಟುವಟಿಕೆ ನಡೆಸುವ ವಿಸೇಷ ತಂಡ ಜಾರಿಯಲ್ಲಿದೆ. ಸರಕಾರಿ ಕಚೇರಿಗಳ ರಜಾ ದಿನದಂದು ಅಕ್ರಮಮರಳು ದಂಧೆಕೋರರ ಚಟುವಟಿಕೆ ಚುರುಕುಗೊಂಡಿರುವ ವಿಚಾರ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮುಂದೆ ರಜಾ ದಿನಗಳಲ್ಲೂ ದಳ ಚಟುವಟಿಕೆ ನಡೆಸಲಿದೆ ಎಂದು ವಲಯಕಂದಾಯಾಧಿಕಾರಿ ತಿಳಿಸಿದರು.