ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ನ ನಿಯೋಗ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದ ಬಳಿಕ ಈಗ ಪಿಡಿಪಿ ನಾಯಕರೂ ತಮ್ಮ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ.
10 ಸದಸ್ಯರ ಪಿಡಿಪಿ ನಿಯೋಗ ಸೆ.07 ರಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲಿದೆ ಎಂದು ಎಎನ್ ಐ ವರದಿ ಪ್ರಕಟಿಸಿದೆ. ಆರ್ಟಿಕಲ್ 370 ರದ್ದತಿ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳನ್ನೂ ಗೃಹ ಬಂಧನದಲ್ಲಿರಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಅಂಗವಾಗಿ ತಾಯಿಯನ್ನು ಭೇಟಿ ಮಾಡುವುದನ್ನು ಉದಾಹರಣೆಯನ್ನಾಗಿ ನೀಡಿ ಮೆಹಬೂಬಾ ಮುಫ್ತಿ ಅವರ ಮಗಳು ಇಲ್ತಿಜಾ ಮುಫ್ತಿ ಪ್ರಧಾನಿಗೆ ಪತ್ರ ಬರೆದು ತಾಯಿ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲದೇ ತಮ್ಮ ತಾಯಿಯ ಪರವಾಗಿ ಬರೆದಿದ್ದ ಪತ್ರದಲ್ಲಿ ಆ.05 ರ ನಂತರ ಬಂಧನಕ್ಕೊಳಗಾದವರ ಸಂಖ್ಯೆಯ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದ್ದರು. ಎನ್ ಸಿ ನಿಯೋಗ ಓಮರ್ ಅಬ್ದುಲ್ಲಾ ಅವರನ್ನೂ ಭೇಟಿ ಮಾಡುವ ಸಾಧ್ಯತೆಗಳಿವೆ. ಜಮ್ಮು-ಕಾಶ್ಮೀರದ ಗೌರ್ನರ್ ಸತ್ಯಪಾಲ್ ಮಲೀಕ್ ಎನ್ ಸಿ ನಾಯಕರ ಭೇಟಿಗೆ ಅನುಮತಿ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಇದೇ ವೇಳೆ ಆರ್ಟಿಕಲ್ 370 ಬಗ್ಗೆ ಮಾತನಾಡಿರುವ ಎನ್ ಸಿ ನಾಯಕರು ನಾವು ಮೋಸಕ್ಕೊಳಗಾಗಿದ್ದೇವೆ. ಆರ್ಟಿಕಲ್ 370 ಯನ್ನು ಮರುಸ್ಥಾಪಿಸುವುದಕ್ಕೆ ಯತ್ನಿಸುತ್ತೇವೆ. ಆ.05 ರ ಹಿಂದೆ ಏನಿತ್ತೋ ಹಾಗೆಯೇ ಎಲ್ಲವೂ ಇರುವಂತೆ ಮಾಡಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ.