ಬದಿಯಡ್ಕ: ಸತತ ಯೋಗಾಭ್ಯಾಸದಿಂದ ಹಾಗೂ ಸಾತ್ವಿಕ ಆಹಾರ ಸೇವನೆಯಿಂದ ದುಶ್ಚಟಗಳನ್ನು ದೂರಮಾಡಬಹುದು. ಅದಕ್ಕಾಗಿ ಪ್ರಾಥಮಿಕ ಶಿಕ್ಷಣದಿಂದಲೇ ಯೋಗವನ್ನು ಅಳವಡಿಸಿಕೊಳ್ಳಬೇಕೆಂದು ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕ ಕೇಶವ ಪ್ರಸಾದ ಕುಳಮರ್ವ ಅಭಿಪ್ರಾಯಪಟ್ಟರು.
ಬದಿಯಡ್ಕ ಸಂಸ್ಕøತಿ ಭವನದಲ್ಲಿ ಶ್ರೀಮಾತಾ ಯೋಗಕೇಂದ್ರದ ವತಿಯಿಂದ ಜರಗಿದ ಒಂದು ವಾರದ ಯೋಗಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಯೋಗಶಿಕ್ಷಕ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡಿ ಕಷ್ಟಪಟ್ಟು ಸಾಧನೆ ಮಾಡಿದರೆ ಪ್ರಸಿದ್ಧಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಈ ನಿಟ್ಟಿನಲ್ಲಿ ಸತತ ಸಾಧನೆ ಅಗತ್ಯ ಎಂದು ಶಿಬಿರಾರ್ಥಿಗಳಿಗೆ ಅನೇಕ ಮಾಹಿತಿಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಂದ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಯೋಗಶಿಕ್ಷಕಿಯರಾದ ಶಾರದಾ ಕಾಡಮನೆ ಹಾಗೂ ದಿವ್ಯ ಪಳ್ಳತ್ತಡ್ಕ ಇವರು ಯೋಗಾಚಾರ್ಯರಿಗೆ ಗುರುಕಾಣಿಕೆಯನ್ನು ಸಮರ್ಪಿಸಿದರು. ಕರಿಂಬಿಲ ಲಕ್ಷ್ಮಣ ಪ್ರಭು, ವೀಣಾ ಶ್ಯಾನುಭೋಗ್, ಕೃಷ್ಣ ಹೆಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮಾತಾ ಯೋಗಕೇಂದ್ರದ ಅಧ್ಯಕ್ಷ ಡಾ. ಕೇಶವ ಪ್ರಸಾದ ಚಾಲತ್ತಡ್ಕ ಸ್ವಾಗತಿಸಿ, ಶ್ಯಾಮ ಆಳ್ವ ಕಡಾರು ವಂದಿಸಿದರು.