ಬ್ರೆಸಿಲಿಯಾ: ಬ್ರಿಕ್ಸ್ ಸಮಾವೇಶದ ನೇಪಥ್ಯದಲ್ಲಿ ಬುಧವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿಯಾಗಿ ಮಾತುಕತೆ ನಡೆಸಿದರು.
ಪ್ರಧಾನಿ ಮೋದಿ ಮತ್ತು ಭಾರತದ ಜನರ ಆತಿಥ್ಯವನ್ನು ಮರೆಯಲಾಗುವುದಿಲ್ಲ ಎಂದು ಚೆನ್ನೈಯಲ್ಲಿ ನಡೆದ ಭಾರತ – ಚೀನಾ ನಡುವಿನ ಎರಡನೇ ಅನೌಪಚಾರಿಕ ಸಭೆ ಕುರಿತು ಕ್ಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಅವರು ಚೀನಾದಲ್ಲಿ 2020ರಲ್ಲಿ ನಡೆಯಲಿರುವ ಮೂರನೇ ಅನೌಪಚಾರಿಕ ಸಭೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು.
ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಕುರಿತಂತೆ ನಿಕಟ ಬಾಂಧವ್ಯದ ಮಹತ್ವವನ್ನು ಉಭಯ ನಾಯಕರು ಒತ್ತಿ ಹೇಳಿದರು. ವ್ಯಾಪಾರ ಮತ್ತು ಆರ್ಥಿಕತೆ ಕುರಿತ ಉನ್ನತ ಮಟ್ಟದ ನಿಯೋಗ ಶೀಘ್ರವೇ ಸಭೆ ಸೇರಬೇಕೆಂದು ಇಬ್ಬರು ನಾಯಕರೂ ಅಭಿಪ್ರಾಯಪಟ್ಟರು. ಮುಂದಿನ ವರ್ಷ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ 70 ನೇ ವರ್ಷಾಚರಣೆಗೆ ಸಿದ್ಧತೆಗಳನ್ನು ಮೋದಿ ಕ್ಸಿ ಪರಾಮರ್ಶಿಸಿದರು.ಗಡಿ ಕುರಿತಂತೆ ವಿಶೇಷ ಪ್ರತಿನಿಧಿಗಳು ಮತ್ತೆ ಸಭೆ ನಡೆಸಲಿದ್ದಾರೆ ಎಂಬುದನ್ನೂ ನಾಯಕರು ತಿಳಿಸಿ, ಗಡಿಯಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದು ಅಗತ್ಯ ಎಂದರು.
ವಿಶ್ವ ವ್ಯಾಪಾರ ಸಂಘಟನೆ, ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್ ಸಿ ಇ ಪಿ) ಮೊದಲಾದ ವಿಚಾರಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಚರ್ಚೆ ನಡೆಸಿದರು.