ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿಯ ಐ.ಎಸ್.ಒ. ಘೋಷಣೆ ಹಾಗೂ ನವೀಕರಿಸಿದ ಕುಟುಂಬಶ್ರೀ ಹಾಲ್‍ನ ಉದ್ಘಾಟನೆ ಕಾರ್ಯಕ್ರಮವು ನ.30ರಂದು ನಡೆಯಲಿರುವುದು. ಕಾಸರಗೋಡು ಸಂಸದ, ಶಾಸಕ, ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು ಎಂದು ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ತಿಳಿಸಿರುತ್ತಾರೆ.
ಗುರುವಾರ ಗ್ರಾಮಪಂಚಾಯಿತಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿ ಗ್ರಾಮಪಂಚಾಯಿತಿಗೆ ಐಎಸ್‍ಒ ಅಂಗೀಕಾರ ಲಭಿಸಿದ್ದು, ಮುಂದಿನ ದಿನಗಳಲ್ಲಿ ಜನತೆಗೆ ಉನ್ನತಮಟ್ಟದ ಸೇವೆ ಲಭ್ಯವಾಗಲಿದೆ. ಸಕಾಲಕ್ಕೆ ಎಲ್ಲಾ ಮಾಹಿತಿಗಳೂ ಗ್ರಾಮಪಂಚಾಯಿತಿಯಿಂದ ಸಾರ್ವಜನಿಕರಿಗೆ ಲಭಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಅನ್ವರ್ ಓಸೋನ್ ಮಾತನಾಡುತ್ತಾ ಐಎಸ್‍ಒ ಅಂಗೀಕಾರಕ್ಕಾಗಿ ಎಲ್ಲಾ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳೂ, ಅಧಿಕಾರಿಗಳು, ನೌಕರವೃಂದದವರು ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಜನತೆಗೆ ಸೇವೆಯನ್ನು ನೀಡಲಿದ್ದೇವೆ ಎಂದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ ಎಂ. ಪ್ರದೀಪನ್, ಉಪಾಧ್ಯಕ್ಷೆ ಸೈಬುನ್ನೀಸ, ವಿದ್ಯಾಭ್ಯಾಸ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ, ಗ್ರಾಮಪಂಚಾಯಿತಿ ಸದಸ್ಯರುಗಳಾದ ಜಯಶ್ರೀ, ಪ್ರಸನ್ನ, ಅನಿತಾ ಕ್ರಾಸ್ತಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು :
ನ.30ರಂದು ಬೆಳಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕುಟುಂಬಶ್ರೀ ಹಾಲ್ ಉದ್ಘಾಟಿಸಲಿದ್ದಾರೆ. ಶಾಸಕ ಎನ್.ಎ.ನೆಲ್ಲಿಕುನ್ನು ಐಎಸ್‍ಒ ಅಂಗೀಕಾರವನ್ನು ಘೋಷಣೆಮಾಡಲಿದ್ದಾರೆ. ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆಯನ್ನು ವಹಿಸಲಿರುವರು. ಉಪಾಧ್ಯಕ್ಷೆ ಸೈಬುನ್ನೀಸ, ಜಿಲ್ಲಾಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಜಿಪಂ ಸ್ಥಾಯಿಸಮಿತಿ ಅಧ್ಯಕ್ಷ ಎ.ಎಸ್.ಅಹಮ್ಮದ್, ಗ್ರಾಪಂ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಶಬಾನಾ, ಬ್ಲೋಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ, ಕಾರ್ಯದರ್ಶಿ ಎಂ.ಪ್ರದೀಪನ್, ಗ್ರಾಪಂ ಸದಸ್ಯರು, ವಿವಿಧ ಪಕ್ಷಗಳ ಪ್ರತಿನಿಧಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.