ಕಾಸರಗೋಡು: ನಾಗರಿಕ ಪೂರೈಕೆ ವಲಯದಲ್ಲಿ ಕೇಂದ್ರಸರ್ಕಾರ ಕೇರಳದೊಂದಿಗೆ ತೋರಿಸುವ ಅವಗಣನೆ ಖಂಡಿಸಿ, ಡಿಸೆಂಬರ್ 3ರಂದು ಪಾರ್ಲಿಮೆಂಟ್‍ಗೆ ಮುತ್ತಿಗೆ ನಡೆಸಲು ಕೇರಳ ರಿಟೈಲ್ ರೇಶನ್ ಡೀಲರ್ಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ತಿಳಿಸಿದೆ.
ಕೇರಳಕ್ಕೆ ಜನಸಂಖ್ಯೆ ಆಧಾರದಲ್ಲಿ ಅಗತ್ಯ ಆಹಾರ ಸಾಮಗ್ರಿ ಪೂರೈಸಬೇಕು, ರೇಶನ್ ವಲಯವನ್ನು ಖಾಸಗಿ ಕಂಪೆನಿಗೆ ಹಸ್ತಾಂತರಿಸುವ ಯತ್ನ ಕೈಬಿಡಬೇಕು, ಸೀಮೆಎಣ್ಣೆ ಸಹಿತ ರೇಶನ್ ಸಾಮಗ್ರಿ ನಿರಂತರವಾಗಿ ಕಡಿತಗೊಳಿಸುವ ಕ್ರಮ ಕೈಬಿಡಬೇಕು, ವ್ಯಾಪಾರಿಗಳಿಗೆ ಹಾಗೂ ಸಹಾಯಕರಿಗೆ ಇಎಸ್‍ಐ ಸಂರಕ್ಷಣೆ ಒದಗಿಸಬೇಕು, ವ್ಯಾಪಾರಿಗಳಿಗೆ ಹಾಗೂ ಸೇಲ್ಸ್‍ಮ್ಯಾನ್‍ಗಳಿಗೆ ಜೀವನಕ್ಕೆ ಅಗತ್ಯವುಳ್ಳ ವೇತನ ನೀಡುವಂತಾಗಲು, ಕೇಂದ್ರದ ಪಾಲು ಹೆಚ್ಚಿಸಬೇಕು, ಜನಸಂಖ್ಯೆ ಆಧಾರದಲ್ಲಿ ಸಬ್ಸಿಡಿ ಆಹಾರಧಾನ್ಯ ಮಂಜೂರುಮಾಡಬೇಕು, ರೇಶನ್‍ಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದನ್ನು ಕೈಬಿಡಬೇಕು ಮುಂತಾದ ಬೇಡಿಕೆ ಮುಂದಿರಿಸಿ ಧರಣಿ ನಡೆಯಲಿರುವುದು.
ಧರಣಿಯನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಧರಣಿ ಉದ್ಘಾಟಿಸುವರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವಏಣುಗೋಪಾಲ್ ಸಹಿತ ರಾಜ್ಯದ ಎಲ್ಲ ಸಂಸದರು ಧರಣಿಯಲ್ಲಿ ಪಾಲ್ಗೊಳ್ಳುವರು. ಧರಣಿ ಅಂಗವಾಗಿ ಡಿಸೆಂಬರ್ 3ರಂದು ಜಿಲ್ಲೆಯ ಎಲ್ಲ ರೇಶನ್ ಅಂಗಡಿಗಳನ್ನು ಮುಚ್ಚಿ ಸಹಕರಿಸುವಂತೆ ಸಂಘಟನೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬಲ್ಲಾಳ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.