ಕಾಸರಗೋಡು: ಅನೇಕ ವರ್ಷಗಳ ಕಾಯುವಿಕೆಯ ನಂತರ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ನೆನಪು ಶಾಶ್ವತವಾಗಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಕಲೆಗಳ ಉತ್ತಮ ಮರಗಳು ತಲೆಎತ್ತಿ ನಿಲ್ಲಲಿವೆ.
ಕಲೋತ್ಸವದ ಪ್ರಚಾರ ಸಮಿತಿ ವತಿಯಿಂದ ಜಾರಿಗೊಳಿಸುವ "ಗ್ರೀನ್-60" ಯೋಜನೆಯ ಉದ್ಘಾಟನೆ ಸಮಾರಂಭದಲ್ಲಿ ಈ ಸಂಬಂಧ ನಿರ್ಧಾರವನ್ನು ಘೋಷಿಸಲಾಗಿದೆ.
ಯೋಜನೆಯ ಅಂಗವಾಗಿ 60ನೇ ರಾಜ್ಯ ಮಟ್ಟದ ಕಲೋತ್ಸವದ ಸಂಕೇತವಾಗಿ ಜಿಲ್ಲೆಯ ಶಾಲೆಗಳಿಗೆ, ಎನ್.ಎಸ್.ಎಸ್.ಘಟಕಗಳಿಗೆ, ಸಂಘ-ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಮೊದಲಾದವರಿಗೆ 60 ಮಾವಿನ ಸಸಿಗಳನ್ನು ವಿತರಿಸಲಾಗಿದೆ. ನೀಲೇಶ್ವರ ಇನ್ನರ್ ವೀಲ್ ಕ್ಲಬ್ ಈ ಯೋಜನೆ ಜಾರಿಗೊಳಿಸುತ್ತಿದೆ.
ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು "ಗ್ರೀನ್-60" ಯೋಜನೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಜಿಲ್ಲೆಯಲ್ಲಿ ಭೂಗರ್ಭಜಲ ಅಪಾಯಕಾರಿ ರೀತಿ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿ ಸಂರಕ್ಷನೆಯೊಂದೇ ಪರಿಹಾರ ಮಾರ್ಗ. ಕಲೋತ್ಸವ ವೇಳೆ ಹಸುರು ಸಂಹಿತೆ ಪಾಲಿಸುವ ಮತ್ತು ಗ್ರೀನ್-60 ಯೋಜನೆ ಜಾರಿಗೊಳಿಸುವ ಮೂಲಕ ಜಾಗೃತಿ ಕಾಯಕ ನಡೆಸಲಾಗುವುದು ಎಂದು ಹೇಳಿದರು.
ಪ್ರಚಾರ ಸಮಿತಿ ಅಧ್ಯಕ್ಷ ಷಾನವಾಝ್ ಪಾದೂರು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮುಖ್ಯ ಅತಿಥಿಯಾಗಿದ್ದರು. ಇಂದ್ರಜಾಲ ಪಟು ಆನಂದ್ ಮೆಳತ್ತೂರು ಅವರು ಜಾದೂಗಾರಿಕೆಯಲ್ಲಿ ಸೃಷ್ಟಿಸಿದ ಮಾವಿನ ಸಸಿಗಳನ್ನು ಜಿಲ್ಲಾಧಿಕಾರಿ ಮತ್ತು ಕಾಞಂಗಾಡ್ ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಮಹಮೂದ್ ಮುರಿಯಾನಾವಿ ಅವರಿಗೆ ಹಸ್ತಾಂತರಿಸಿದರು.
ಶಾಲೆಯ ಪ್ರಭಾರ ಪ್ರಾಂಶುಪಾಲ ಡೊಮಿನಿಕ್ ಆಗಸ್ಟಿನ್, ಎನ್.ಎಸ್.ಎಸ್. ಜಿಲ್ಲಾ ಸಂಚಾಲಕ ವಿ.ಹರಿದಾಸ್, ಎಸ್.ಸಿ.ಡಿ.ಅಧ್ಯಕ್ಷ ಅಬ್ಬಾಸ್ ಬೀಗಂ, ಎಸ್.ಎಂ.ಸಿ. ಅಧ್ಯಕ್ಷ ಎ.ಎಸ್.ಅಹಮ್ಮದ್, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಷೀಬಾ ಇ.ನಾಯರ್, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಸಿ.ಎಂ.ಎ.ಜಲೀಲ್, ಸುಕುಮಾರನ್ ಪೂಚ್ಚಕ್ಕಾಡ್, ಕೆ.ವಿ.ಎಸ್.ಬಾಲಕೃಷ್ಣನ್, ಎನ್.ಎಸ್.ಎಸ್.ಪದಾಧಿಕಾರಿಗಳು, ಸ್ವಯಂಸೇವಕರು, ವಿದ್ಯಾರ್ಥಿಗಳು, ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.