ಬದಿಯಡ್ಕ: 66ನೇ ಅಖಿಲ ಭಾರತ ಸಹಕಾರಿ ವಾರಾಚರಣೆಯ ಕಾಸರಗೋಡು ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭವು ನೀರ್ಚಾಲು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಕಾಸರಗೋಡು ಸಹಾಯಕ ನೊಂದಣಾಧಿಕಾರಿ(ಜನರಲ್) ವಿ.ಮುಹಮ್ಮದ್ ನೌಶಾದ್ ಉದ್ಘಾಟಿಸಿ ಮಾತನಾಡಿ ಪರಸ್ಪರ ಸಹಕಾರೀ ಮನೋಭಾವವು ಜೀವನದುದ್ದಕ್ಕೂ ಇರಬೇಕು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಹಕಾರಿ ಸಂಸ್ಥೆಗಳು ತೋರ್ಪಡಿಸಿವೆ. ಜೀವನದ ಎಲ್ಲಾ ವಿಭಾಗದಲ್ಲೂ ಸಹಕಾರಿ ಸಂಘಗಳು ಪರಸ್ಪರ ಸಹಕಾರೀ ಮನೋಭಾವದೊಂದಿಗೆ ಇಂದು ವ್ಯಾಪಿಸಿಕೊಂಡಿವೆ. ಸಹಕಾರ ಮನೋಭಾವ ಎಂಬುದು ಜೀವನದ ಪ್ರಧಾನ ಭಾಗವಾಗಿದೆ. ಹಿರಿಯರ ಕಾಲದಲ್ಲಿಯೇ ಸಹಕಾರೀ ವಿಭಾಗಕ್ಕೆ ಸಾಕಷ್ಟು ಪ್ರೋತ್ಸಾಹ ಲಭಿಸಿದೆ. ಸಹಕಾರಿ ವಲಯವು ದೇಶದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ ಎಂದು ಅವರು ಸಹಕಾರಿ ಕ್ಷೇತ್ರದ ಕುರಿತು ಸವಿವರವಾಗಿ ಮಾತನಾಡಿದರು.
ಉಪ ನೊಂದಣಾಧಿಕಾರಿ (ಜನರಲ್) ಕೆ.ಜಯಚಂದ್ರನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಡೆಪ್ಯೂಟಿ ರಿಜಿಸ್ಟ್ರಾರ್ ಅಬ್ದುಲ್ ಅಸೀಸ್ ಪಿ., ಕಾಸರಗೋಡು ಕೃಷಿಕರ ಸಹಕಾರಿ ಮಾರಾಟ ಸಂಘ, ನೀರ್ಚಾಲು ಇದರ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಶುಭಾಶಂಸನೆಗೈದರು. ಪೆರಡಾಲ ಸೇವಾ ಸಹಕಾರಿ ಬೇಂಕ್ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ, ಕಾರ್ಯದರ್ಶಿ ಅಜಿತ ಕುಮಾರಿ ವಿ. ವಂದಿಸಿದರು. ಪೆರಡಾಲ ಸೇವಾಸಹಕಾರಿ ಬೇಂಕ್ ನಿರ್ದೇಶಕ ರವಿಕಾಂತ ಕಡಾರು ನಿರೂಪಿಸಿದರು.
ನಂತರ ನಡೆದ ಸೆಮಿನಾರ್‍ನಲ್ಲಿ ಸಹಕಾರಿ ಕ್ಷೇತ್ರದ ಮೂಲಕ ಸರಕಾರದ ಹೊಸ ಯೋಜನೆಗಳು ವಿಚಾರದಲ್ಲಿ ನಿವೃತ್ತ ಉಪ ನೊಂದಣಾಧಿಕಾರಿ ಶಶಿಧರನ್ ಕಾಟೂರು ವಿಷಯ ಮಂಡನೆ ಮಾಡಿದರು. ಉಪ ನೊಂದಣಾಧಿಕಾರಿ (ಜನರಲ್) ಕೆ.ಜಯಚಂದ್ರನ್ ಈ ಸಂದರ್ಭದಲ್ಲಿ ಮಾತನಾಡಿ ವಾರಾಚರಣೆಯ ಭಾಗವಾಗಿ ಹಮ್ಮಿಕೊಂಡ ತರಗತಿಗಳು ಜನತೆಗೆ ಲಭಿಸಬೇಕು. ಸಹಕಾರಿ ಕ್ಷೇತ್ರದ ಮೂಲಕ ಪ್ರಳಯ ಬಾಧಿತರಿಗೆ 2000ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕೇರಳದ ಕೃಷಿವಲಯದಲ್ಲಿ ಯುವಜನತೆ ಧುಮುಕಬೇಕಿದೆ. ಕೇರಳದ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ಕೃಷಿಗೆ ಆದ್ಯತೆಯನ್ನು ನೀಡಬೇಕು. ಸಹಕಾರಿ ಕ್ಷೇತ್ರಕ್ಕೆ ರಾಜ್ಯ ಸರಕಾರವು ಕೊಡುಗೆಯನ್ನು ನೀಡುತ್ತಿದೆ ಎಂದು ಸಹಕಾರಿ ಕ್ಷೇತ್ರದ ಕೆಲವೊಂದು ವಿಚಾರಗಳು ತಿಳಿಯಪಡಿಸಿದರು. ಕುಂಬ್ಡಾಜೆ ಸೇವಾಸಹಕಾರಿ ಬೇಂಕ್ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ, ಕಾಡಕಂ ಸೇವಾ ಸಹಕಾರಿ ಬೇಂಕ್ ಅಧ್ಯಕ್ಷ ಕೆ.ಶಂಕರನ್, ಮಹಾತ್ಮಜಿ ಹೌಸಿಂಗ್ ಸೇವಾ ಸಂಘದ ಅಧ್ಯಕ್ಷ ಚೇಕೋಡ್ ಬಾಲಕೃಷ್ಣನ್ ನಾಯರ್ ಪಾಲ್ಗೊಂಡಿದ್ದರು.