ಮುಂಬೈ: ದಿನಕ್ಕೊಂದು ರೀತಿಯ ರಾಜಕೀಯ ಡ್ರಾಮಕ್ಕೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದಲ್ಲಿ ಅಜಿತ್ ಕುಮಾರ್ ಉಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಅವರ ವಿರುದ್ಧದ 70 ಸಾವಿರ ಕೋಟಿ ನೀರಾವರಿ ಹಗರಣದ ಕೇಸನ್ನು ಭ್ರಷ್ಟಾಚಾರ ನಿಗ್ರಹ ದಳ ಮುಚ್ಚಿ ಹಾಕಿದೆ.
2014ರಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾದ ನಂತರ ಅಜಿತ್ ಪವಾರ್ ಮತ್ತಿತರ ಎನ್ ಸಿಪಿ ನಾಯಕರು ಭಾಗಿಯಾಗಿದ್ದಾರೆ ಎನ್ನಲಾದ ನೀರಾವರಿ ಹಗರಣ ಕುರಿತ ತನಿಖೆಯನ್ನು ಎಸಿಬಿಗೆ ವಹಿಸಲಾಗಿತ್ತು. ಈ ಸಂಬಂಧ ಈವರೆಗೂ ತನಿಖೆ ನಡೆಸಲಾಗುತಿತ್ತು. ಕಾಂಗ್ರೆಸ್ -ಎನ್ ಸಿಪಿ ಆಡಳಿತಾವಧಿಯಲ್ಲಿ ವಿವಿಧ ನೀರಾವರಿ ಯೋಜನೆಗಳ ಅಕ್ರಮ ಅನುಮೋದನೆ ಹಾಗೂ ಅನುಷ್ಠಾನಕ್ಕೆ ಸಂಬಂಧಿಸಿದ ಹಗರಣ ಇದಾಗಿದೆ. 1991 ಹಾಗೂ 2014ರ ನಡುವೆ ಅಜಿತ್ ಪವಾರ್ ಮತ್ತಿತರರು ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ದೇವೇಂದ್ರ ಫಡ್ನವೀಸ್ ಎರಡನೇ ಅವಧಿಗೆ ಮುಖ್ಯಮಂತ್ರಿ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ದಿನ ಆಗುತ್ತಿದ್ದಂತೆ ಎಸಿಬಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಶರದ್ ಪವಾರ್ ವಿರುದ್ಧ ಬಂಡಾಯ ಎದ್ದು ಅಜಿತ್ ಪವಾರ್ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಳೆದ ತಿಂಗಳು ನಡೆದ ವಿಧಾನಸಬಾ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಂಡು ಚುನಾವಣೆ ಎದುರಿಸಿದ ಬಿಜೆಪಿ 150 ಹಾಗೂ ಶಿವಸೇನೆ 56 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಸ್ಪಷ್ಪ ಬಹುಮತ ಬಂದಿತ್ತು. ಆದರೆ, ಸಿಎಂ ಹುದ್ದೆ ಹಾಗೂ ಸಮಾನ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಮೂರು ದಶಕಗಳ ತಮ್ಮ ಸಂಬಂಧವನ್ನು ಕಡಿದುಕೊಂಡಿವೆ.
ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಇಂದು ಬೆಳಗ್ಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎನ್ ವಿ ರಮಣ, ಅಶೋಕ್ ಭೂಷಣ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.