ಮಂಜೇಶ್ವರ: ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಗೂಗಲ್ ನಡೆಸಿದ ರಾಷ್ಟ್ರಮಟ್ಟದ ಗೂಗಲ್ ವಿನ್ಯಾಸ ಸ್ಪರ್ಧೆಯಲ್ಲಿ ಗಡಿನಾಡ ಬಾಲಕನೋರ್ವ ಹೆಮ್ಮೆಯ ಸಾಧನೆಗೈದು ಕೀರ್ತಿಗಳಿಸಿದ್ದಾನೆ.
ಒಂದನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗಾಗಿ 5 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶಾದ್ಯಂತದ 6ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅಂತಿಮ ಹಂತದ ನಾಲ್ವರ ಆಯ್ಕೆಯಲ್ಲಿ ಹೊಸಂಗಡಿ ಸಮೀಪದ ಕಡಂಬಾರ್ ಭಂಡಾರಮನೆಯ ಭೂಷಣ್ ಒಳಗೊಂಡಿದ್ದನು. ಮಂಗಳೂರು ಕೊಡಿಯಾಲಬೈಲು ಸಂತ ಅಲೋಶಿಯಸ್ ಫ್ರೌಢಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ನಾನು ಬೆಳೆದು ದೊಡ್ಡವನಾದಾಗ ಎಂಬ ವಿಷಯದ ಚಿತ್ರರಚನೆಗೆ ಗೂಗಲ್ ಆಹ್ವಾನ ನೀಡಿತ್ತು. ಇದರಲ್ಲಿ ಪಾಲ್ಗೊಂಡ ಭೂಷಣ್ ರಚಿಸಿದ ಪೈಂಟಿಂಗ್ ಆಯ್ಕೆಯಾಯಿತು. ಈ ಸಾಧನೆಗೆ ಮಕ್ಕಳ ದಿನಾಚರಣೆಯಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೂಗಲ್ ಅಧಿಕೃತರು ಭೂಷಣ್ ನಿಗೆ ಲ್ಯಾಪ್ ಟಾಪ್ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಿದರು. ತಂದೆ ನವೀನ್, ತಾಯಿ ಮೀನಾಕ್ಷಿ ಜೊತೆಗೆ ಈ ಬಹುಮಾನವನ್ನು ಭೂಷಣ್ ಪಡೆದುಕೊಂಡನು.