ಬದಿಯಡ್ಕ: ಕೆನರ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ (ಸಿ.ಒ.ಡಿ.ಪಿ) ಮಂಗಳೂರು ಮತ್ತು ಸಿ.ಇ.ಐ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಸಾವಯವ ಕೃಷಿ ಮತ್ತು ಕೈತೋಟದ ಕುರಿತು ಜಾಗೃತಿ ಕಾರ್ಯಾಗಾರವು ಬೇಳ ಸೈಂಟ್ ಮೇರಿಸ್ ಹೈಸ್ಕೂಲ್‍ನಲ್ಲಿ ಜರಗಿತು.
ಕಾರ್ಯಕ್ರಮವನ್ನು ಶಾಲಾ ವ್ಯವಸ್ಥಾಪಕರೂ ಬೇಳ ಚರ್ಚ್‍ನ ಧರ್ಮಗುರುಗಳಾದ ವಂದನೀಯ ಸ್ವಾಮಿ ಜೋನ್‍ವಾಸ್ ಅವರು ಉದ್ಘಾಟಿಸಿ ಪ್ರಸ್ತುತ ಕಾಲದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಉಪಯೋಗಿಸುವುದರಿಂದ ನಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚುತ್ತಿರುವ ಮಾರಕ ರೋಗಗಳಿಗೆ ವಿಷಮಿಶ್ರಿತ ಆಹಾರವೇ ಪ್ರಧಾನ ಕಾರಣ. ಆದುದರಿಂದ ನಮ್ಮ ಮನೆಯಲ್ಲಿ ಮತ್ತು ಶಾಲಾ ಪರಿಸರದಲ್ಲಿ ಮಾದರಿ ಕೈತೋಟ ಬೆಳೆಸುವಂತೆ ಕರೆನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿ.ಒ.ಡಿ.ಪಿ. ಸಂಸ್ಥೆಯ ಸಂಯೋಜಕರಾದ ರವಿ ಕುಮಾರ್ ಕ್ರಾಸ್ತ ಅವರು ಕೈತೋಟ ಎಂದರೇನು, ನಮ್ಮ ಮನೆಗೆ ಬೇಕಾದ ತರಕಾರಿಯನ್ನು ನಾವು ಹೇಗೆ ಬೆಳೆಸಬಹುದು, ಸಾವಯವ ಗೊಬ್ಬರ ಬಳಸುವುದರಿಂದ ಉತ್ತಮ ಇಳುವರಿ ಹೇಗೆ ಪಡೆಯಬಹುದು, ವಿವಿಧ ತರಕಾರಿಗಳನ್ನು ಹೇಗೆ ಬೆಳೆಸಬೇಕು, ಕೀಟನಾಶಕವನ್ನು ಹೇಗೆ ತಯಾರಿಸಬಹುದು, ರಾಸಾಯನಿಕ ಬಳಸುವುದರಿಂದ ಆಗುತ್ತಿರುವ ದುಷ್ಪರಿಣಾಮದ ಕುರಿತು ಮಾಹಿತಿ ನೀಡಿದರು.
ಸಿ.ಒ.ಡಿ.ಪಿ. ಸಂಸ್ಥೆಯ ಸಂಯೋಜಕರಾದ ಪೀಟರ್ ಪೌಲ್ ಅವರು ಪ್ಲಾಸ್ಟಿಕ್ ತ್ಯಾಜವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಮಾಹಿತಿ ನೀಡಿದರು. ಶಾಲಾ ಶಿಕ್ಷಕಿ ಸಿಸ್ಟರ್ ಲೀನಾ ಮತ್ತು ಕಾರ್ಯಕರ್ತೆ ಸವಿತಾ ಅವರು ಕಾರ್ಯಕ್ರಮ ನಿರೂಪಿಸಿದರು.