ಪ್ಯಾರಿಸ್(ಫ್ರಾನ್ಸ್): ಜಮ್ಮು-ಕಾಶ್ಮೀರದ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿರುವ ಪಾಕಿಸ್ತಾನದ ಡಿಎನ್ ಎ ಯಲ್ಲಿಯೇ ಭಯೋತ್ಪಾದನೆ ಇದೆ ಎಂದು ಭಾರತ ತಿರುಗೇಟು ನೀಡಿದೆ.
ಪಾಕಿಸ್ತಾನದ ವಿಲಕ್ಷಣ ನಡವಳಿಕೆಗಳಿಂದಾಗಿ ಅದು ಇತ್ತೀಚೆಗೆ ದುರ್ಬಲ ಆರ್ಥಿಕತೆಗೆ ಇಳಿದಿದೆ. ಭಯೋತ್ಪಾದನೆಯ ಡಿಎನ್ ಎ ಆಳವಾಗಿ ಅಲ್ಲಿ ಬೇರೂರಿದ್ದು ತೀವ್ರಗಾಮಿ ಸಮಾಜವನ್ನು ಸೃಷ್ಟಿಸಿದೆ ಎಂದು ಪ್ಯಾರಿಸ್ ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಭಾರತ ನಿಯೋಗವನ್ನು ಪ್ರತಿನಿಧಿಸಿದ ಅನನ್ಯಾ ಅಗರ್ವಾಲ್ ಹೇಳಿದ್ದಾರೆ.
ವಿಶ್ವಸಂಸ್ಥೆ ವೇದಿಕೆಯನ್ನು ಪಾಕಿಸ್ತಾನ, ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಮತ್ತು ರಾಜಕೀಯ ಮಾಡುವುದಕ್ಕೆ ಬಳಸಿಕೊಳ್ಳುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ. ದುರ್ಬಲ ದೇಶ ಸೂಚ್ಯಂಕ ಪಟ್ಟಿಯಲ್ಲಿ ಕಳೆದ ವರ್ಷ ಪಾಕಿಸ್ತಾನ 14 ನೇ ಸ್ಥಾನದಲ್ಲಿತ್ತು ಎಂದು ಅಗರ್ವಾಲ್ ಈ ಸಂದರ್ಭದಲ್ಲಿ ಸಭೆಯ ಗಮನಕ್ಕೆ ತಂದರು. ಕತ್ತಲೆಯ ಛಾಯೆಗೆ ಪಾಕಿಸ್ತಾನ ತವರಾಗಿದೆ. ತೀವ್ರಗಾಮಿ ಸಿದ್ಧಾಂತಗಳಿಂದ ಮತ್ತು ತೀವ್ರಗಾಮಿ ಗಾಡಾಂಧಕಾರದಿಂದ ಭಯೋತ್ಪಾದನೆಯ ಅಧಃಪತನಕ್ಕೆ ಇಳಿದಿದೆ ಎಂದು ಸಭೆಯಲ್ಲಿ ಟೀಕಿಸಿದರು. ಭಯೋತ್ಪಾದನೆಯೆಂಬ ವಿಷಬೀಜ ಬಿತ್ತಿ ಅದನ್ನು ಹರಡುವಲ್ಲಿ ಪಾಕಿಸ್ತಾನ ಮತ್ತಷ್ಟು ಸಕ್ರಿಯವಾಗಿದೆ ಎಂದು ಹೇಳಿದ ಅವರು, ಪರಮಾಣು ಯುದ್ಧವನ್ನು ಮುಕ್ತವಾಗಿ ಬೋಧಿಸಲು ಮತ್ತು ಶಸ್ತ್ರಾಸ್ತ್ರಗಳನ್ನು ಬೇರೆ ದೇಶಗಳೊಂದಿಗೆ ಯುದ್ಧ ಮಾಡಲು ವಿಶ್ವಸಂಸ್ಥೆ ವೇದಿಕೆಯನ್ನು ಪಾಕಿಸ್ತಾನದ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ಮುಖಾಮುಖಿಯಾದರೆ ಪರಿಸ್ಥಿತಿ ಗಂಭೀರವಾಗುತ್ತದೆ ಎಂದು ಹೇಳಿದ್ದ ಮಾತನ್ನು ಅನನ್ಯಾ ಅಗರ್ವಾಲ್ ಉಲ್ಲೇಖಿಸಿದರು.
ಪಾಕಿಸ್ತಾನ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಸಂದರ್ಶನವೊಂದರಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಹಕ್ಕಾನಿಯಂತ ಭಯೋತ್ಪಾದಕರು ಪಾಕಿಸ್ತಾನದ ಹೀರೋಗಳು ಎಂದು ಹೇಳಿದ್ದನ್ನು ಕೂಡ ಅಗರ್ವಾಲ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಅಲ್ಪಸಂಖ್ಯಾತ ಸಮುದಾಯ ತನ್ನದೇ ನೆಲದಲ್ಲಿ ಅನುಭವಿಸುತ್ತಿರುವ ಮಾನವ ಹಕ್ಕುಗಳ ಶೋಚನೀಯ ಪರಿಸ್ಥಿತಿಗಳನ್ನು ಲೆಕ್ಕಿಸದೆ ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಭಾರತವನ್ನು ಅಪಚಾರ ಮಾಡಲು ಇಂತಹ ಪೈಶಾಚಿಕ ವಾಕ್ಚಾತುರ್ಯದಲ್ಲಿ ತೊಡಗಿದೆ ಎಂದು ಅಗರ್ವಾಲ್ ಆರೋಪಿಸಿದರು.