ಪೆರ್ಲ: ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ 'ಸಾಧಕರ ಜತೆ ಸಂವಾದ' ಅಭಿಯಾನದ ಭಾಗವಾಗಿ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಯುವಕವಿ, ಸಂಘಟಕ ಸುಭಾಶ್ ಪೆರ್ಲ ಅವರ ಮನೆಯನ್ನು ಸಂದರ್ಶಿಸಿ ಮಾಹಿತಿಗಳನ್ನು ಸಂಗ್ರಹಿಸಿದರು. ಹಿರಿಯ ಸಾಹಿತಿ ಹರೀಶ್ ಪೆರ್ಲ ಉಪಸ್ಥಿತರಿದ್ದರು.
ಸಂದರ್ಶನದ ಸಂದರ್ಭ ಸುಭಾಶ್ ಪೆರ್ಲರೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು ಸಾಹಿತ್ಯ ಪ್ರೇರಣೆ, ಕವನ ಸೃಷ್ಟಿಯ ಜಾಣ್ಮೆ, ಜೊತೆಗೆ ಕೃಷಿ ಅನುಭವಗಳ ಬಗ್ಗೆ ಮಾಹಿತಿ ಪಡೆದರು. ಸುಭಾಶ್ ಪೆರ್ಲ ಅವರು ತಮ್ಮ ಮೊದಲ ಕವನ ಸಂಕಲನ ಮಲ್ಲಿಗೆ, ಕಥಾ ಸಂಕಲನಗಳ ಬಗ್ಗೆ ಮಾತನಾಡಿ ತನ್ನ ಮಾತೃಶ್ರೀಯವರ ಪ್ರೇರಣೆಯಿಂದ ಸಾಹಿತ್ಯದ ಆಸಕ್ತಿ ಉಂಟಾಯಿತು. ಕಥೆ, ಕವನ, ಪ್ರಬಂzs, ಪ್ರವಾಸ ಕಥನದಂತಹ ಸೃಜನಾತ್ಮಕ ಬರಹಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತರಾಗಬೇಕು. ಮನಸ್ಸಿನ ನಿರಾಳತೆ, ಸಮಾಜವನ್ನು ಅರ್ಥೈಸುವ ದೃಷ್ಟಿಕೋನಗಳಿಗೆ ನಿಖರತೆ ಉಂಟಾಗುತ್ತದೆ. ಪ್ರಕೃತಿಯ ಬಗೆಗೆ ಭಾವನಾತ್ಮಕ ಚಿಂತನೆ ಹೊಂದಿರಬೇಕು ಎಂದು ಅವರು ತಿಳಿಸಿದರು. ಜೊತೆಗೆ ಇತ್ತೀಚೆಗೆ ಸಂಪಾದಿಸಲಾದ ಜಿಲ್ಲೆಯ ವಿವಿಧ ಯುವ ಕವಿಗಳ ಕವನ ಸಂಕಲನ ಭಾವ ತರಂಗ ಕೃತಿಯ ಕವನಗಳನ್ನು ವಾಚಿಸಿದರು. ಹೈನುಗಾರಿಕೆ, ಜೈವಿಕ ಕೃಷಿಯ ಬಗೆಗಿನ ಮಾಹಿತಿ ನೀಡಿ, ಜೀವಾಮೃತ ತಯಾರಿಯ ಮಾಹಿತಿ ನೀಡಿದರು.
ಹರೀಶ್ ಪೆರ್ಲ ಅವರು ಹಾಸ್ಯ ಬರಹಗಳ ಬಗ್ಗೆ ಮಾಹಿತಿ ನೀಡಿ, ಮನಸ್ಸು ಉಲ್ಲಸಿತವಾದಾಗ ಬರವಣಿಗೆಗೆ ತೊಡಗಿಸಿಕೊಳ್ಳಬೇಕು. ಭಾತ ತೀತ್ರತೆಯಿಂದಷ್ಟೆ ಅಕ್ಷರಗಳು ಪೋಣಿಸಲ್ಪಡಲು ಸಾಧ್ಯ ಎಂದರು. ಶಾಲಾ ಶಿಕ್ಷಕರು, ಸಿಬ್ಬಂದಿಗಳು ವಿದ್ಯಾರ್ಥಿಗಳ ಸಂವಾದದಲ್ಲಿ ಜೊತೆಗಿದ್ದು ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.