ನವದೆಹಲಿ: ಅಯೋಧ್ಯೆ ತೀರ್ಪು ಬಂದ ಬಳಿಕ ಸಮಾಜದ ಪ್ರತಿಯೊಂದು ವರ್ಗದವರು, ಪ್ರತಿಯೊಂದು ಧರ್ಮದವರು ಅದನ್ನು ಸ್ವಾಗತಿಸಿದ ರೀತಿ ಅಭೂತಪೂರ್ವವಾಗಿದೆ. ಇದು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಸಂಪ್ರದಾಯಕ್ಕೆ ಪುರಾವೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ಕುರಿತ ಸುಪ್ರೀಂ ತೀರ್ಪಿನ ನಂತರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
ಪ್ರಧಾನಿ ಮೋದಿಯವರ ಭಾಷಣದ ಪ್ರಮುಖ ಸಾರಾಂಶ ಹೀಗಿದೆ:
ಅಯೋಧ್ಯೆ ಪ್ರಕರಣವನ್ನು ಪ್ರತಿದಿನ ಆಲಿಸಬೇಕೆಂದು ಇಡೀ ದೇಶ ಬಯಸಿತ್ತು. ಅದು ಸಂಭವಿಸಿದೆ. ಹಾಗೆಯೇ ಇಂದು ಅಂತಿಮ ತೀರ್ಪು ಬಂದಿದೆ. ದಶಕಗಳಿಂದ ನಡೆಯುತ್ತಿದ್ದ ಈ ಪ್ರಕರಣವು ಅಂತಿಮವಾಗಿ ಮುಕ್ತಾಯವನ್ನು ಕಂಡಿದೆ. ನವ ಭಾರತದಲ್ಲಿ ಭಯಕ್ಕೆ ಸ್ಥಾನವಿಲ್ಲ, ಸಂವಿಧಾನದ ಅಡಿಯಲ್ಲಿ ಕಾನೂನಿನಡಿಯಲ್ಲಿ ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಸುಪ್ರೀಂ ಕೋರ್ಟ್ ದೇಶಕ್ಕೆ ತೋರಿಸಿದೆ. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ ಮತ್ತು ಇಂದು ಭಾರತದಲ್ಲಿ ಪ್ರಜಾಪ್ರಭುತ್ವವು ಜೀವಂತವಾಗಿದೆ ಮತ್ತು ಪ್ರಬಲವಾಗಿದೆ ಎಂದು ತೋರಿಸಿದೆ. ಇಡೀ ರಾಷ್ಟ್ರವು ತೀರ್ಪನ್ನು ಒಪ್ಪಿಕೊಂಡಿದೆ. "ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಎಲ್ಲಾ ಅಂಶಗಳನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದೆ ಮತ್ತು ಎಲ್ಲರ ಒಪ್ಪಿಗೆಯೊಂದಿಗೆ ಈ ನಿರ್ಧಾರಕ್ಕೆ ಬಂದಿರುವುದು ಇಡೀ ದೇಶಕ್ಕೆ ಸಂತೋಷದ ವಿಷಯವಾಗಿದೆ.
ನವೆಂಬರ್ ೯ ಬರ್ಲಿನ್ ಗೋಡೆ ಮುರಿದು ಬಿದ್ದ ದಿನ ಇಂದು ನವೆಂಬರ್ ೯ ರಂದು ಕರ್ತಾರ್‌ಪುರ ಕಾರಿಡಾರ್ ತೆರೆಯಲಾಗಿದೆ ಮತ್ತು ಈ ದಿನ ಅಯೋಧ್ಯೆಯ ತೀರ್ಪು ನೀಡಲಾಗಿದೆ. ನವೆಂಬರ್ ೯ ರ ಸಂದೇಶವು ಎಲ್ಲರೂ ಒಂದಾಗುವುದು, ಒಗ್ಗಟ್ಟಿನಿಂದ ಸೇರುವುದು ಮತ್ತು ಒಟ್ಟಾಗಿ ಮುಂದುವರಿದು ಎಲ್ಲಾ ಕಹಿಗಳನ್ನು ಕೊನೆಗಾಣಿಸುವುದು ಎಂದಾಗುತ್ತದೆ.