ಕಾಸರಗೋಡು: ಶಬರಿಮಲೆ ದರ್ಶನಕ್ಕೆ ಆಗಮಿಸಿ, ಕೊಚ್ಚಿ ಪೊಲೀಸ್ ಆಯುಕ್ತರಿಂದ ಯಾವುದೇ ರಕ್ಷಣಾ ಭರವಸೆ ಲಭಿಸದ ಹಿನ್ನೆಲೆಯಲ್ಲಿ ತೃಪ್ತಿ ದೇಸಾಯಿ ಮತ್ತು ಇತರ ಆರು ಮಂದಿ ಕೊನೆಗೂ ನಿಲುವು ಬದಲಾಯಿಸಿ, ಅಯ್ಯಪ್ಪ ದರ್ಶನ ಪಡೆಯದೆ ವಾಪಸಾಗಿದ್ದಾರೆ.
ಶಬರಿಮಲೆ ದರ್ಶನಕ್ಕೆ ಮುಂದಾದಲ್ಲಿ ಭಾರಿ ಆಕ್ರಮಣಗಳಿಗೆ ಕಾರಣವಾಗಬಹುದು ಎಂಬ ಪೊಲೀಸರ ಎಚ್ಚರಿಕೆ ಹಿನ್ನೆಲೆಯಲ್ಲಿ ಶಬರಿಮಲೆ ದರ್ಶನದಿಂದ ಹಿಂದೆ ಸರಿದ ತೃಪ್ತಿ ದೇಸಾಯಿ, ಈ ಬಾರಿ ತೆರಳುತ್ತೇನೆ, ಮತ್ತೆ ಅಯ್ಯಪ್ಪ ದರ್ಶನಕ್ಕೆ ಆಗಮಿಸುವುದಾಗಿ ತಿಳಿಸಿದ್ದಾಳೆ. ಕಳೆದ ವರ್ಷವೂ ತೃಪ್ತಿ ದೇಸಾಯಿ ಶಬರಿಮಲೆ ದರ್ಶನಕ್ಕೆ ಆಗಮಿಸಿದ್ದು, ಭಕ್ತಾದಿಗಳ ಭಾರಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸಾಗಬೇಕಾಗಿ ಬಂದಿತ್ತು. ಅಂದು ಕೂಡಾ ಮತ್ತೆ ಶಬರಿಮಲೆ ದರ್ಶನಕ್ಕೆ ಆಗಮಿಸುವುದಾಗಿ ತಿಳಿಸಿ ವಾಪಸಾಗಿದ್ದಳು.
ಪೊಲೀಸ್ ಸಂರಕ್ಷಣೆ ಲಭಿಸುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ತೃಪ್ತಿ ದೇಸಾಯಿ ಮತ್ತು ತಂಡ ಪೊಲೀಸ್ ಆಯುಕ್ತರ ಕಚೇರಿಯಿಂದ ನೆಡುಂಬಾಶ್ಯೇರಿ ವಿಮಾನ ನಿಲ್ದಾಣಕ್ಕೆ ಪೊಲೀಸ್ ಸಂರಕ್ಷಣೆಯಲ್ಲಿ ಪ್ರಯಾಣ ಬೆಳೆಸಿತು.
ಪ್ರಕರಣ ಸುಪ್ರೀಂಕೋಟು ಪರಿಗಣನೆಯಲ್ಲಿರುವುದರಿಂದ ಪೊಲೀಸ್ ಸಂರಕ್ಷಣೆ ನೀಡಲಾಗದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು. ಆದೇಶ ಉಲ್ಲಂಘಿಸಿದಲ್ಲಿ ಬಂಧಿಸಲೂ ಪೊಲೀಸರು ತಯಾರಿ ನಡೆಸಿದ್ದರು.