ಮಂಜೇಶ್ವರ: ನಿತ್ಯವೂ ಅಪಘಾತ ಸಂಭವಿಸುತ್ತಿರುವ ಮಂಜೇಶ್ವರ ರೈಲ್ವೇ ನಿಲ್ದಾಣದಲ್ಲಿ ಮೇಲ್ಸೇತುವೆ ನಿರ್ಮಿಸಬೇಕು, ಮಂಜೇಶ್ವರ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು, ಸಂಪೂರ್ಣವಾಗಿ ಹದಗೆಟ್ಟ ತಲಪಾಡಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಗೊಂದು ಪರಿಹಾರವನ್ನು ಕಾಣಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮಂಜೇಶ್ವರ ವಲಯ ಕಾಂಗ್ರೆಸ್ ನೇತಾರರು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಕಾಸರಗೋಡು ನಿವಾಸಕ್ಕೆ ತೆರಳಿ ಮನವಿಯನ್ನು ಸಲ್ಲಿಸಿದರು.
ಮಂಜೇಶ್ವರದಲ್ಲಿ ರೈಲ್ವೇ ಅಪಘಾತ ನಿತ್ಯ ಕಥೆಯಾಗಿದೆ. ಕಳೆದ ಎರಡು ವರ್ಷದ ಮಧ್ಯೆ ಮಂಜೇಶ್ವರದಲ್ಲಿ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಕ್ಕೂ ಮೀರಿದೆ. ರೈಲ್ವೇ ಮೇಲ್ಸೇತುವೆ ನಿರ್ಮಾಣವಾಗದೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಅಪಘಾತ ಸಂಭವಿಸಿದಾಗ ಮಾತ್ರ ಎಚ್ಚೆತ್ತುಕೊಳ್ಳುವ ಪ್ರಾದೇಶಿಕ ನೇತಾರರು ಬಳಿಕ ಅಪ್ರತ್ಯಕ್ಷವಾಗುತ್ತಿರುವುದನ್ನು ಸಂಸದರಿಗೆ ಮನವರಿಕೆ ಮಾಡಿದ ನೇತಾರರು ಈ ಸಲ ಹೇಗಾದರೂ ಮಾಡಿ ಮೇಲ್ಸೇತುವೆಯನ್ನು ನಿರ್ಮಿಸುವಂತೆ ಒತ್ತಾಯಿಸಿದರು.
ಅದೇ ರೀತಿ ಮಂಜೇಶ್ವರ ಆರೋಗ್ಯ ಕೇಂದ್ರದಲ್ಲಿ ಈ ಮೊದಲು ಮರಣೋತ್ತರ ಪರೀಕ್ಷೆ ನಡೆಸುವಂತಹ ಸೌಲಭ್ಯವಿದ್ದರೂ ಬಳಿಕ ಅದನ್ನು ರದ್ದುಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಸಂಸದರು ಇದಕ್ಕೂ ಮುತುವರ್ಜಿ ವಹಿಸಿ ಮರಣೋತ್ತರ ಪರೀಕ್ಷೆಯ ಸೌಲಭ್ಯವನ್ನು ಮಂಜೇಶ್ವರದ ಜನತೆಗೆ ಒದಗಿಸಿಕೊಡುವಂತೆ ಮನವಿ ಮಾಡಿದರು. ಪ್ರಯಾಣಿಕರಿಗೆ ಶಾಪವಾಗಿ ಪರಿಣಮಿಸಿರುವ ತಲಪಾಡಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಶೋಚನೀಯಾವಸ್ಥೆಗೊಂದು ಪರಿಹಾರವನ್ನು ಕಂಡುಕೊಳ್ಳುವಂತೆಯೂ ಮನವರಿಕೆ ಮಾಡಲಾಯಿತು.
ಎಲ್ಲವನ್ನು ನೂತನ ಶಾಸಕರೊಂದಿಗೆ ಚರ್ಚಿಸಿ ಜೊತೆಯಾಗಿ ಸೇರಿ ಕೊಂಡು ಪರಿಹಾರವನ್ನು ಕಾಣುವುದಾಗಿ ಸಂಸದರು ನಿಯೋಗಕ್ಕೆ ಭರವಸೆಯನ್ನು ನೀಡಿದರು.
ಸಂಸದರಿಗೆ ಮನವಿ ನೀಡಲು ತೆರಳಿದ ನಿಯೋಗದಲ್ಲಿ ಮಂಜೇಶ್ವರ ವಲಯ ಕಾಂಗ್ರೆಸ್ ಅಧ್ಯಕ್ಷ ಸುಕುಮಾರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಕರಿಯ್ಯಾ ಶಾಲಿಮಾರ್, ಇದ್ರಿಸ್, ಹಮೀದ್, ಸಾಮಾಜಿಕ ಕಾರ್ಯಕರ್ತ ಹನೀಫ್ ಶಾರ್ಜಾ ಮೊದಲಾದವರು ಉಪಸ್ಥತರಿದ್ದರು.