ಕುಂಬಳೆ/ಬದಿಯಡ್ಕ: ರಸ್ತೆ ಶೋಚನೀಯ ಸ್ಥಿತಿಯ ಹಿನ್ನೆಲೆಯಲ್ಲಿ ಕಾಸರಗೋಡು-ತಲಪಾಡಿ, ಕಾಸರಗೋಡು-ಪೆರ್ಲ ರೂಟ್‍ಗಳಲ್ಲಿ ಖಾಸಗಿ ಬಸ್‍ಗಳ ಅನಿರ್ದಿಷ್ಟಾವಧಿ ಮುಷ್ಕರ ಸೋಮವಾರ ಆರಂಭಗೊಂಡಿತು. ಖಾಸಗಿ ಬಸ್ ಮುಷ್ಕರದಿಂದ ಪ್ರಯಾಣಿಕರು ಸಮಸ್ಯೆಗೀಡಾದರು.
ಶೋಚನೀಯ ಸ್ಥಿತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ವಾಹನ ಸುಗಮ ಸಂಚಾರಕ್ಕೆ ಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಮುಷ್ಕರ ನಡೆಯುತ್ತಿದೆ. ರಸ್ತೆಗಳು ತೀರಾ ಕೆಟ್ಟು ಹೋದುದರಿಂದ ಬಸ್‍ಗಳ ಟಯರ್ ಸಹಿತ ಬಿಡಿ ಭಾಗಗಳು ಹಾನಿಯಾಗುತ್ತಿದ್ದು, ಇದರಿಂದ ಬಸ್ ನಿರ್ವಹಣೆ ಕಷ್ಟವಾಗಿದೆ. ಆರ್ಥಿಕ ನಷ್ಟವೂ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಮಾಲಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ನಡೆಸುವ ಒಳ ಪ್ರದೇಶಕ್ಕಿರುವ ಕೆಲವು ಬಸ್‍ಗಳು ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆಯಂತೆ ಕೆಲವು ಬಸ್‍ಗಳು ಓಡಾಡುತ್ತಿವೆ ಎಂದು ಬಸ್ ಮಾಲಕರು ತಿಳಿಸಿದ್ದಾರೆ.
ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿರುವ ಈ ಪ್ರದೇಶದ ವಿದ್ಯಾರ್ಥಿಗಳಿಗೆ ಸೋಮವಾರ ಪರೀಕ್ಷೆಯ ಹಿನ್ನೆಲೆಯಲ್ಲಿ ಕೆಲವು ಬಸ್‍ಗಳು ಸರ್ವೀಸ್ ನಡೆಸಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಬಸ್‍ಗಳು ಓಡಾಡಿವೆ. ಆದರೆ ಕಾಸರಗೋಡು-ಪೆರ್ಲ ರೂಟ್ ನ ಬಸ್ ಗಳು ಸಂಚಾರವನ್ನು ಸಂಪೂರ್ಣ ಮೊಟಕುಗೊಳಿಸಿವೆ.
ಹೊಸಂಗಡಿ-ಆನೆಕಲ್ಲು, ಹೊಸಂಗಡಿ-ಮೀಯಪದವು, ಹೊಸಂಗಡಿ-ಬೆಜ್ಜ, ಉಪ್ಪಳ-ಬಾಯಾರು ಮೊದಲಾದ ರೂಟ್‍ಗಳಲ್ಲಿ ಖಾಸಗಿ ಬಸ್‍ಗಳ ಪೈಕಿ ಕೆಲವೊಂದು ಬಸ್‍ಗಳು ಸರ್ವೀಸ್ ನಡೆಸಿವೆ.