ಕಾಸರಗೋಡು : ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಅರಿಯದ ಅಧ್ಯಾಪಕರ ನೇಮಕಾತಿಗೆ ಆದೇಶಿಸಿದ ಪಿಎಸ್ ಸಿ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಗುರುವಾರ ನಡೆದ ಕಾಸರಗೋಡು ಜಿ.ಪಂ.ಆಡಳಿತ ಸಮಿತಿ ಐತಿಹಾಸಿಕ ತೀರ್ಮಾನ ಕೈಗೊಂಡಿತು.
ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರುವ ತನಕ ಕಾಸರಗೋಡು ಜಿಲ್ಲೆಯ ಯಾವುದೇ ಕನ್ನಡ ಮಾಧ್ಯಮ ಶಾಲೆಗೆ ಪ್ರಸ್ತುತ ಪಿಎಸ್ ಸಿ ರಾಂಕ್ ಪಟ್ಟಿಯಲ್ಲಿರುವ ಕನ್ನಡ ಅರಿಯದ ಅಧ್ಯಾಪಕರನ್ನು ನೇಮಕಾತಿ ಮಾಡದಂತೆ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಜಿ.ಪಂ.ಆಡಳಿತ ಸಮಿತಿ ತೀರ್ಮಾನ ಮಾಡಿ ನಿರ್ದೇಶನ ನೀಡಲಾಯಿತು. ಮಾತ್ರವಲ್ಲ ಈ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ನಡೆಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಜಿ.ಪಂ.ಅಧ್ಯಕ್ಷ ಎಜಿಸಿ ಬಶೀರ್ ಮಾತನಾಡಿ ಕಾಸರಗೋಡು ಜಿಲ್ಲಾ ಪಂಚಾಯತು ಕನ್ನಡಿಗರ ಸಮಸ್ಯೆಗೆ ಸ್ಪಂದಿಸುತ್ತದೆ, ಕನ್ನಡ ವಿದ್ಯಾರ್ಥಿಗಳ ಮೇಲಿನ ಅನ್ಯಾಯವನ್ನು ಜಿ.ಪಂ.ಯಾವತ್ತೂ ಸಹಿಸುವುದಿಲ್ಲ ಎಂದು ಹೇಳಿದರು. ಸಭೆಯಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ನೇಮಕಾತಿ ವಿರುದ್ಧ ಚರ್ಚೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ನ್ಯಾಯವಾದಿ ಕೆ. ಶ್ರೀಕಾಂತ್, ಜೋಸ್ ಪದಾಲ್, ಇ.ಪದ್ಮಾವತಿ, ಶಾನವಾಸ್ ಪಾದೂರ್, ಪದ್ಮಜ, ಸುಬೈದಾ, ಪುಷ್ಪ ಅಮೆಕ್ಕಳ, ಸಮೀರಾ, ಬ್ಲಾಕ್ ಪಂಚಾಯತು ಅಧ್ಯಕ್ಷರಾದ ಗೌರಿ, ಮೊಹಮ್ಮದ್ ಚಾಯಿಂಡಡಿ, ಓಮನ ರಾಮಚಂದ್ರನ್, ಕಾರ್ಯದರ್ಶಿ ನಂದಕುಮಾರ್, ಡಿಡಿಇ ಪುಷ್ಪಾ ಮುಂತಾದವರು ಭಾಗವಹಿಸಿದರು.