ಕುಂಬಳೆ: ವಿವಿಧ ರಾಜ್ಯಗಳಲ್ಲಿ ಲಾಟರಿ ವ್ಯವಹಾರ ನಿಷೇಧಿಸಿದ್ದರೂ ಕೇರಳದಲ್ಲಿ ದಿನಂಪ್ರತಿ ಲಾಟರಿ ಟಿಕೇಟ್ ಖರೀದಿಯಲ್ಲಿ ಹೆಚ್ಚಳ ಉಂಟಾಗುತ್ತಿದೆ. ಪ್ರತೀ ದಿನ ಸರಾಸರಿ ೧.೦೩ ಕೋಟಿ ಲಾಟರಿ ಟಿಕೇಟ್‌ಗಳು ಮಾರಾಟವಾಗುತ್ತಿದೆ.
ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಹೊಸದಾಗಿ ಲಾಟರಿ ಟಿಕೇಟ್ ಮಾರಾಟ ಮಾಡುವ ಏಜೆಂಟರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳಲಾಗುತ್ತಿದೆ. ಈ ಕಾರಣದಿಂದ ಮುಂದಿನ ಮೂರು ತಿಂಗಳ ತನಕ ಹೊಸ ಏಜೆನ್ಸಿ ಮಂಜೂರು ಮಾಡದಿರುವ ತೀರ್ಮಾನವನ್ನು ರಾಜ್ಯ ಲಾಟರಿ ಇಲಾಖೆ ಕೈಗೊಂಡಿದೆ. ತಿರುವೋಣಂ ಬಂಪರ್ ಲಾಟರಿ ಟಿಕೇಟ್‌ನ ಮಾರಾಟ ಬಳಿಕ ರಾಜ್ಯದಲ್ಲಿ ಲಾಟರಿ ಟಿಕೇಟ್ ಖರೀದಿಸುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗ ತೊಡಗಿದೆ.
ಕೇರಳದಲ್ಲಿ ಪ್ರತೀ ದಿನ ೧.೩ ಕೋಟಿ ಲಾಟರಿ ಟಿಕೇಟ್‌ಗಳನ್ನು ಮುದ್ರಿಸಲಾಗುತ್ತಿದೆ. ಅದರೆ ಮಾರಾಟವಾಗದೆ ಟಿಕೇಟ್‌ಗಳು ಉಳಿದುಕೊಳ್ಳುವುದು ಇತ್ತೀಚೆಗೆ ದಿನಗಳಲ್ಲಿ ವಿರಳವಾಗಿದೆ. ಲಾಟರಿ ಟಿಕೇಟ್‌ಗಳ ಮಾರಾಟ ಏಜೆನ್ಸಿ ಪಡೆಯಲು ಹೊಸದಾಗಿ ದೈನಂದಿನ ಅದೆಷ್ಟೋ ಮಂದಿ ಲಾಟರಿ ಕಚೇರಿಗಳನ್ನು ಸಂಪರ್ಕಿಸುತ್ತಿದ್ದಾರೆ. ಅವರಿಗೂ ಲಾಟರಿ ಟಿಕೇಟ್‌ಗಳನ್ನು ನೀಡಬೇಕಾಗಿದ್ದಲ್ಲಿ ಹೆಚ್ಚುವರಿಯಾಗಿ ಮುದ್ರಿಸಬೇಕಾಗಿ ಬರುತ್ತಿದೆ. ಅದು ಲಾಟರಿ ಇಲಾಖೆಗೆ ಭಾರೀ ಆರ್ಥಿಕ ಲಾಭ ಉಂಟು ಮಾಡುವುದಿದ್ದರೂ ಪರೋಕ್ಷವಾಗಿ ಅದು ಸಮಸ್ಯೆಗೆ ಕಾರಣವಾಗಲಿದೆ ಎಂಬ ನಿಲುವಿನಲ್ಲಿ ಹೊಸ ಲಾಟರಿ ಏಜೆನ್ಸಿಗಳಿಗೆ ಸದ್ಯ ಅನುಮತಿ ನೀಡದೆ ಇರಲು ಇಲಾಖೆ ತೀರ್ಮಾನಿಸಿದೆ. ೧೦ ಸಾವಿರಕ್ಕಿಂತ ಹೆಚ್ಚು ಲಾಟರಿ ಟಿಕೇಟ್ ಮಾರಾಟ ಮಾಡುವ ೨೫೦ರಷ್ಟು ಮಾರಾಟ ಏಜೆಂಟರು ರಾಜ್ಯದ ಹಲವು ಜಿಲ್ಲೆಗಳಲ್ಲಿದ್ದಾರೆ. ಇದರ ಹೊರತಾಗಿ ೬೦ ಸಾವಿರದಷ್ಟು ಇತರ ಲಾಟರಿ ಮಾರಾಟ ಕೇಂದ್ರಗಳೂ ರಾಜ್ಯದಲ್ಲಿವೆ. ಇದನ್ನೆಲ್ಲಾ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿರುವ ೩೫ ಕಚೇರಿಗಳನ್ನು ನಿಯಂತ್ರಿಸಬೇಕಾಗಿದೆ. ಹೆಚ್ಚು ಲಾಟರಿ ಟಿಕೇಟ್ ಮುದ್ರಿಸಬೇಕಾಗಿ ಬಂದಲ್ಲಿ ಲಾಟರಿ ಮುದ್ರಣ ಸಿಬ್ಬಂದಿಗಳಿಗೂ ಹೆಚ್ಚುವರಿ ಕೆಲಸದ ಹೊರೆ ಉಂಟು ಮಾಡುತ್ತಿದೆ. ಅದರಿಂದಾಗಿ ಹೆಚ್ಚು ಲಾಟರಿ ಟಿಕೇಟ್ ಮುದ್ರಿಸದಂತೆ ಇಲಾಖೆಯ ಸಿಬ್ಬಂದಿಗಳೂ ಒತ್ತಡ ಹೇರುತ್ತಿದ್ದಾರೆ.
ಲಾಟರಿ ಇಲಾಖೆಗೆ ಲಾಭ : ೨೦೧೦-೧೧ರಲ್ಲಿ ಲಾಟರಿ ಇಲಾಖೆಗೆ ೫೫೭.೬೯ ಕೋಟಿ ರೂ.ಗಳ ಬಂದಿದ್ದು, ಎಲ್ಲಾ ಖರ್ಚು ವೆಚ್ಚ ಕಳೆದು ೯೨.೦೨ ಕೋಟಿ ರೂ. ಲಾಭ ಲಭಿಸಿದೆ. ೨೦೧೧-೧೨ರಲ್ಲಿ ೧೨೮೭.೦೮ ವರಮಾನ ಮತ್ತು ೩೯೪.೮೧ ಕೋಟಿ ರೂ. ಲಾಭ, ೨೦೧೨-೧೩ರಲ್ಲಿ ೨೭೭೮.೮೦ ಕೋಟಿ ರೂ. ವರಮಾನ, ೬೮೧.೭೬ ಕೋಟಿ ರೂ.ಲಾಭ, ೨೦೧೩-೧೪ರಲ್ಲಿ ೩೭೯೩.೭೩ ಕೋಟಿ ರೂ. ವರಮಾನ, ೭೮೮.೭೪ ಕೋಟಿ ರೂ. ಲಾಭ, ೨೦೧೪-೧೫ರಲ್ಲಿ ೫೪೪೫.೪೩ ಕೋಟಿ ರೂ. ವರಮಾನ, ೧೧೬೮.೨೬ ಕೋಟಿ ರೂ. ಲಾಭ, ೨೦೧೫-೧೬ರಲ್ಲಿ ೬೩೧೭.೭೩ ಕೋಟಿ ರೂ. ವರಮಾನ, ೧೪೬೧.೧೬ ಕೋಟಿ ರೂ.ಗಳ ಲಾಭ, ೨೦೧೬-೧೭ರಲ್ಲಿ ೭೩೯೪.೯೧ ಕೋಟಿ ರೂ. ವರಮಾನ, ೧೬೯೧.೦೫ ಕೋಟಿ ರೂ. ಲಾಭ, ೨೦೧೭-೧೮ರಲ್ಲಿ ೮೯೭೭.೨೪ ಕೋಟಿ ರೂ. ವರಮಾನ, ೧೮೦೦.೨೫ ಕೋಟಿ ರೂ. ಲಾಭ, ೨೦೧೮-೧೯ರಲ್ಲಿ ೧೦,೩೭೭ ಕೋಟಿ ರೂ. ವರಮಾನ ಮತ್ತು ೧೯೦೦.೩೫ ಕೋಟಿ ರೂ.ಗಳ ಲಾಭ ಇಲಾಖೆಗೆ ಬಂದಿದೆ.