ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶಗಳ ಅಂಗನವಾಡಿಗಳಿಗೆ ಕನ್ನಡದ ಕೈಪಿಡಿ ಪೂರೈಕೆಯಾಗುವ ಮೂಲಕ ಇಲ್ಲಿನ ಅಂಗನವಾಡಿಗಳ ಚಟುವಟಿಕೆ ಮತ್ತಷ್ಟು ಸಕ್ರಿಯಗೊಳ್ಳಲು ಸಾಧ್ಯವಾಗಲಿದೆ ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಸಾಮಾಜಿಕ ನೀತಿ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದರು.
ಅವರು ಕಾಞಂಗಾಡ್ ಪುರಭವನದಲ್ಲಿ ಶನಿವಾರ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೂ ಉಪಕಾರವಾಗುವ ಉದ್ದೇಶದಿಂದ ಕನ್ನಡದಲ್ಲೂ ಹೊರತರಲಾದ ಅಂಗನವಾಡಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
೬ ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳ, ಗರ್ಭಿಣಿಯರ, ಎದೆಹಾಲುಣಿಸುವ ತಾಯಂದಿರ, ಯುವಜನತೆಯ ಆರೋಗ್ಯ ಪೋಷಣೆ ವಿಚಾರಗಳಲ್ಲಿ ಸಮಗ್ರ ಸೇವೆ ನೀಡುತ್ತಿರುವ ಅಂಗನವಾಡಿಗಳ ಕೈಹೊತ್ತಗೆಗಳನ್ನು ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೆ ಉಪಕಾರವಾಗುವ ಉದ್ದೇಶದಿಂದ ಕನ್ನಡದ ಆವೃತ್ತಿಯನ್ನು ರಚಿಸಲಾಗಿದೆ. ಎರಡು ಪಾಠಪುಸ್ತಕಗಳು ಮತ್ತು ಅಸೆಸ್ ಮೆಂಟ್ ಕಾರ್ಡ್ ಗಳು ಕನ್ನಡದಲ್ಲೂ ಪ್ರಕಟಗೊಂಡಿವೆ. ರಾಜ್ಯ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ತೀರ್ಮಾನ ಪ್ರಕಾರ ಈ ಭಾಷಾಂತರ ಪ್ರಕ್ರಿಯೆ ನಡೆಸಲಾಗಿದೆ.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಯಾಗಿ ಭಾಗವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್, ಪ್ರೊ. ಪಿ.ಶ್ರೀಕೃಷ್ಣ ಭಟ್ ಮುಂತಾದವರು ಉಪಸ್ಥಿತರಿದ್ದರು.