ಮುಳ್ಳೇರಿಯ: ಏಳನೇ ತರಗತಿಯ ಸಮತ್ವ ಪರೀಕ್ಷೆ ಉದ್ಘಾಟಿಸಿದ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ಅವರು ಪರೀಕ್ಷೆಯನ್ನೂ ಬರೆದು ಅಚ್ಚರಿ ಮೂಡಿಸಿದರು.
ಮುಳ್ಳೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾಕ್ಷರತಾ ಮಿಶನ್ ನೇತೃತ್ವದಲ್ಲಿ ಶನಿವಾರ ನಡೆದ 7ನೇ ತರಗತಿಯ ಸಮತ್ವ ಪರೀಕ್ಷೆಯನ್ನು ಉದ್ಘಾಟಿಸಿದ ಗ್ರಾ.ಪಂ. ಅಧ್ಯಕ್ಷೆ ಅನಸೂಯ ರೈ ಬಳಿಕ ಪೂರ್ತಿ ಸಮಯ ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದರು.
ಮೂಲತಃ ಮಂಗಳೂರು ದೇರಳೆಕಟ್ಟೆ ನಿವಾಸಿಯಾದ ಅವರು 7ನೇ ತರಗತಿಯಲ್ಲಿಯೇ ತನ್ನ ಶಿಕ್ಷಣವನ್ನು ಕೊನೆಗೊಳಿಸಿದ್ದರು. 1973 ರಲ್ಲಿ ಆದೂರು ಕುಂಡಲ ನಿವಾಸಿ ಕೃಷಿಕ ಅರವಿಂದ ರೈ ಅವರನ್ನು ವಿವಾಹವಾದ ಅನಸೂಯ ರೈ ಬಳಿಕ ಕುಟುಂಬ ಜೀವನದಲ್ಲಿ ತೊಡಗಿಸಿಕೊಂಡಿದ್ದರು. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗಿದ್ದರೂ ತನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಕಳೆದ ವರ್ಷ ಸಮತ್ವ ಪರೀಕ್ಷೆ ಉದ್ಘಾಟಿಸಲು ಹೋದಾಗ ತನಗೂ ಶಿಕ್ಷಣ ಮುಂದುವರಿಸುವ ಬಯಕೆ ಚಿಗುರೊಡೆಯಿತು. ಆದೂರು ನಿರಂತರ ಕಲಿಕಾ ಕೇಂದ್ರದ ಪ್ರೇರಕ್ ಕೆ.ಮಾಲತಿ ಅವರಲ್ಲಿ ವಿಷಯವನ್ನು ತಿಳಿಸಿ ಪರೀಕ್ಷೆಗೆ ನೋಂದಾವಣೆ ಮಾಡಿದರು. ಮುಂದೆ ಆರು ತಿಂಗಳ ಕಲಿಕೆಯನ್ನು ಪಂಚಾಯಿತಿ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಣೆಯೊಂದಿಗೆ ಬಹುತೇಕ ತರಗತಿಗಳಿಗೆ ಹಾಜರಾಗಿ ಪೂರೈಸಿದರು.
ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ 6ನೇ ವಾರ್ಡಿನಿಂದ ಗೆಲುವು ಪಡೆದ ಅವರಿಗೆ ಕಳೆದ ವರ್ಷ ಪಂಚಾಯಿತಿ ಅಧ್ಯಕ್ಷೆಯಾಗುವ ಭಾಗ್ಯ ಲಭಿಸಿತು. ಪುತ್ರ ಅಷಿತ್ ರೈ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯ ಪ್ರಬಂಧಕರಾಗಿದ್ದಾರೆ. ಮಗಳು ಆಶ್ರಿತ ರೈ ದಂತ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಕ್ಷರತಾ ಮಿಷನ್ ನ ನೋಡಲ್ ಪ್ರೇರಕ್ ಎ.ತಂಗಮಣಿ, ಪ್ರೇರಕ್‍ರಾದ ಮಾಲತಿ, ಕಾಂಚನ, ಇಬ್ರಾಹಿಂ ಇವರ ಕಲಿಕೆಗೆ ಸಹಕಾರ ನೀಡಿದರು.
ಬಾಕ್ಸ್:
ರಾಜ್ಯಾದ್ಯಂತ ಅತ್ಯುತ್ಕøಷ್ಟ ಶೈಲಿಯಲ್ಲಿ ಕಾರ್ಯವೆಸಗುತ್ತಿರುವ ಸಾಕ್ಷರತಾ ಮಿಶನ್ ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿರುವ ಹಿರಿಯ ನಾಗರಿಕರ ಶಿಕ್ಷಣ ಕನಸನ್ನು ನನಸಾಗಿಸುವಲ್ಲಿ ಮುಂಚೂಣಿಯಲ್ಲಿದೆ. ಹಲವು ಜಿಲ್ಲೆಗಳಲ್ಲಿ ಈ ವರ್ಷ ಸಾಕ್ಷರತಾ ಮಿಶನ್ ನ ಪಿಯು ಶಿಕ್ಷಣ ಕೂಡಾ ಆರಂಭವಾಗಿದೆ. ಜೊತೆಗೆ ಇತ್ತೀಚೆಗೆ ಉತ್ತರ ಕೇರಳದ 103ರ ಹರೆಯದ ವಯೋವೃದ್ದೆಯೋರ್ವೆ ಏಳನೇ ತರಗತಿ ಪರೀಕ್ಷೆ ಬರೆಯುವ ಮೂಲಕ ಗಮನ ಸೆಳೆದಿದ್ದರು.