ಮಂಜೇಶ್ವರ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆದ ದೀವಾವಳಿ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಜನರ ಕಷ್ಟ ಕಾರ್ಪಣ್ಯಗಳಿಗೆ ದೇವರ ಅನುಗ್ರಹದ ಮೂಲಕ ಪರಿಹಾರ ಒದಗಿಸಿ, ಮಾರ್ಗದರ್ಶನ ನೀಡಿ, ಆತ್ಮವಿಶ್ವಾಸ ತುಂಬಿ ಪ್ರೀತಿ, ವಿಶ್ವಾಸಗಳೊಂದಿಗೆ ಭಕ್ತ ಜನರನ್ನು ಮುನ್ನಡೆಸುತ್ತಿರುವ ಬ್ರಹ್ಮಶ್ರೀ ಪೊಳ್ಳಕಜೆ ಗೋವಿಂದ ಭಟ್ ಅವರನ್ನು ಭಕ್ತಿ ಗೌರವಗಳೊಂದಿಗೆ ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಐ.ಕೃಷ್ಣ ಭಟ್ ಅವರು ಅಧ್ಯಕ್ಷತೆ ವಹಿಸಿದರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ರವಿಶಂಕರ ಹೊಳ್ಳ ಅವರು ಆಶೀರ್ವಚನ ನೀಡಿದರು. ಸಮ್ಮಾನಿತರ ಅಭಿನಂದನಾ ಭಾಷಣವನ್ನು ವೇದಮೂರ್ತಿ ನಡಿಬೈಲು ಶಂಕರ ಭಟ್ ಮಾಡುತ್ತಾ ಭಯ ಮಿಶ್ರಿತವಾದ ಭಕ್ತಿ ಇದ್ದಾಗ ಮಾತ್ರ ಭಗವಂತನ ಹತ್ತಿರ ಹೋಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಕ್ಷೇತ್ರದ ಪವಿತ್ರಪಾಣಿ ಹೊಸಮನೆ ರಾಜೇಶ್ ತಾಳಿತ್ತಾಯ, ಅನುವಂಶಿಕ ಮೊಕ್ತೇಸರ ಮೊಗಸಾಲೆ ಕೇಶವ ಭಟ್, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಉಮೇಶ್ ಉಪಸ್ಥಿತರಿದ್ದರು. ಪ್ರತಿಷ್ಠಾನದ ಸಂಚಾಲಕ ಭಾಸ್ಕರ ಕೋಳ್ಯೂರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಡಾ.ಬಾಲಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಿಠಲ ಭಟ್ ಮೊಗಸಾಲೆ ವಂದಿಸಿದರು. ದೀಕ್ಷಿತಾ ಕೋಳ್ಯೂರು ಕಾರ್ಯಕ್ರಮ ನಿರೂಪಿಸಿದರು.