ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ ಎಸ್ ಎನ್ ಎಲ್ ಆಡಳಿತ ಮಂಡಳಿಯು ಸ್ವಯಂ ನಿವೃತ್ತಿ(ವಿಆರ್ ಎಸ್) ಪಡೆಯುವಂತೆ ಸಿಬ್ಬಂದಿಗಳ ಮೇಲೆ ಒತ್ತಡ ಹೇರುತ್ತಿದೆ. ಈ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿ ಬಿಎಸ್ ಎನ್ ಎಲ್ ನೌಕರರು ಸೋಮವಾರ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದಾರೆ.
ಇಂದು ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿರುವ ಬಿಎಸ್ ಎನ್ ಎ ಎಲ್ ನೌಕರರ ಸಂಘಟನೆಗಳು, ವಿಆರ್ ಎಸ್ ಪಡೆಯದಿದ್ದರೆ ನಿವೃತ್ತಿ ವಯಸ್ಸನ್ನು 58ಕ್ಕೆ ಇಳಿಸಲಾಗುವುದು ಮತ್ತು ದೂರದ ಊರುಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಆಡಳಿತ ಮಂಡಳಿ ಬೆದರಿಕೆ ಹಾಕುತ್ತಿರುವುದಾಗಿ ಬಿಎಸ್ ಎನ್ ಎಲ್ ಅಖಿಲ ಭಾರತ ಸಂಘ ಮತ್ತು ಸಂಸ್ಥೆಗಳ ಸಂಚಾಲಕ ಪಿ ಅಭಿಮನ್ಯು ಅವರು ಆರೋಪಿಸಿದ್ದಾರೆ.
ನಾವು ವಿಆರ್ ಎಸ್ ವಿರೋಧಿಸುತ್ತಿಲ್ಲ. ಯಾರಿಗೆ ಲಾಭ ಅನಿಸುತ್ತದೆ ಅವರು ವಿಆರ್ ಎಸ್ ಪಡೆದುಕೊಳ್ಳಲಿ. ಕೆಳ ಹಂತದ ನೌಕರರಿಗೆ ಅದು ಲಾಭದಾಯಕವಾಗಿಲ್ಲ. ಹೀಗಾಗಿ ಅವರಿಗೆ ವಿಆರ್ ಎಸ್ ತೆಗೆದುಕೊಳ್ಳಲ ಬಯಸುತ್ತಿಲ್ಲ. ಆದರೆ ಅವರ ಆಡಳಿತ ಮಂಡಳಿ ಒತ್ತಡ ಹೇರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಬಿಎಸ್ ಎನ್ ಎಲ್ ಸ್ವಯಂ ನಿವೃತ್ತಿ ಯೋಜನೆ -2019 ಇತ್ತೀಚೆಗೆ ಆರಂಭವಾಗಿದ್ದು ಡಿಸೆಂಬರ್ 3ರವರೆಗೆ ಇರುತ್ತದೆ. 70 ಸಾವಿರದಿಂದ 80 ಸಾವಿರದವರೆಗೆ ಸಿಬ್ಬಂದಿಗಳು ಸ್ವಯಂ ನಿವೃತ್ತಿ ಘೋಷಿಸಿದರೆ ಸರ್ಕಾರಕ್ಕೆ 7 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತದೆ.