ಮಂಜೇಶ್ವರ : 'ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು' ಇದರ ಪ್ರಾಯೋಜಕತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನಕಲಾ ಸಂಘ ಮತ್ತು ಅಧ್ಯಯನ ಕೇಂದ್ರ ಕುಂಜತ್ತೂರು, ಮಂಜೇಶ್ವರ' ಸಂಸ್ಥೆಯ ಮೂಲಕ ನಡೆಸಲಾಗುವ ಎರಡುತಿಂಗಳ ಯಕ್ಷಗಾನ ಕಲಿಕಾ ತರಗತಿ ಉದ್ಘಾಟನೆಯನ್ನು ಇತ್ತೀಚೆಗೆ ಶ್ರೀ ಮಹಾಲಿಂಗೇಶ್ವರ ಸಭಾಭವನ ಕುಂಜತ್ತೂರಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ದೀಪಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು " ಯಕ್ಷಗಾನವೊಂದು ಪರಿಪೂರ್ಣ ಕಲೆ. ಸಾಧನೆ ಹಾಗೂ ಸೇವಾಭಾವದಿಂದ ನಮ್ಮನ್ನು ನಾವು ತೊಡಗಿಸಿಕೊಂಡಾಗ ಕಲೆಯಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯ ಹಾಗಾದಾಗ ಕೀರ್ತಿ ತನ್ನಿಂದ ತಾನೆ ಬರುತ್ತದೆ, ಕರ್ನಾಟಕ ಸರ್ಕಾರ ಯಕ್ಷಗಾನ ಅಕಾಡೆಮಿಯಲ್ಲಿ ಗಡಿನಾಡು ಕಾಸರಗೋಡಿಗೆ ಸದಸ್ಯತ್ವವನ್ನು ನೀಡಿ ತರಬೇತಿ, ಉಪನ್ಯಾಸದಂತ ಅಕಾಡೆಮಿಕ್ ಕಾರ್ಯಕ್ರಮಗಳಿಗೆ ಅನುದಾನವನ್ನು ನೀಡುತ್ತಿರುವುದಕ್ಕೆ ನಾವು ಕರ್ನಾಟಕ ಸರ್ಕಾರಕ್ಕೆ ಆಭಾರಿಗಳಾಗಿರಬೇಕು ಮಾತ್ರವಲ್ಲ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ನಮ್ಮ ದಕ್ಷತೆ ಪ್ರಾಮಾಣಿಕತೆಯನ್ನು ತೋರಬೇಕಾಗಿದೆ' ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಚಕ್ರತೀರ್ಥ ಅಧ್ಯಕ್ಷತೆ ವಹಿಸಿದ್ದು, ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಮಂಜುನಾಥ ಭಟ್, ಶ್ರೀಮಹಾಲಿಂಗೇಶ್ವರ ವಿದ್ಯಾನಿಕೇತನ ಟ್ರಸ್ಟ್ ಕುಂಜತ್ತೂರು ಇದರ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಬಳಕ, ಮಂಜೇಶ್ವರ ಗ್ರಾಮ ಪಂಚಾಯತಿ ಸದಸ್ಯೆ ಶೋಭ ವಿ. ಶೆಟ್ಟಿ ಚಕ್ರತೀರ್ಥ, ನಾಟ್ಯ ಗುರುಗಳಾದ ಜಗದೀಶ ಗಟ್ಟಿ ಉಚ್ಚಿಲ, ರವೀಂದ್ರನಾಥ ಶೆಟ್ಟಿ ಕುಂಜತ್ತೂರು ಅತಿಥಿಗಳಾಗಿ ಭಾಗವಹಿಸಿದ್ದರು. ದಾಮೋದರ ಶೆಟ್ಟಿ ಕುಂಜತ್ತೂರು ಸಭೆ ನಿರ್ವಹಿಸಿದರು.