ನವದೆಹಲಿ; ಶಬರಿಮಲೆ ವಿವಾದದಲ್ಲಿ ಗುರುವಾರ ನೀಡಿರುವ ಅತಿ ಮುಖ್ಯ ಆದೇಶವನ್ನು ಸರ್ಕಾರ ಓದಬೇಕು ಎಂದು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನಿನ್ನೆ ಹೇಳಿದ್ದಾರೆ.
ತಮ್ಮ ಹಾಗೂ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ಪರವಾಗಿ ನ್ಯಾಯಮೂರ್ತಿ ನಾರಿಮನ್ ಭಿನ್ನ ಆದೇಶವನ್ನು ನೀಡಿದ್ದರು.
ಶಬರಿಮಲೆ ಕೇಸಿನಲ್ಲಿ ನೀಡಿದ ಭಿನ್ನ ತೀರ್ಪನ್ನು ಓದಲು ನಿಮ್ಮ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಹೇಳಿ, ಅದು ತುಂಬಾ ಮುಖ್ಯವಾದ ಆದೇಶ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಅವರಿಗೆ ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ. ಸರ್ಕಾರಿ ಅಧಿಕಾರಿಗಳ ಮಧ್ಯೆ ಒಂದು ರೀತಿಯ ಅನಿಸಿಕೆ ತಳೆದಿರುತ್ತದೆ, ಹೀಗಾಗಿ ಅವರು ಸಾಮಾನ್ಯವಾಗಿ ನ್ಯಾಯಾಲಯದ ಆದೇಶ ಪಾಲಿಸಲು ಹೋಗುವುದಿಲ್ಲ. ನಾವು ನಿನ್ನೆ ಕೊಟ್ಟಿರುವ ಆದೇಶವನ್ನು ಕಡ್ಡಾಯವಾಗಿ ಸರ್ಕಾರ ಪಾಲಿಸಬೇಕು, ಯಾವುದೇ ರೀತಿಯ ಉಲ್ಲಂಘನೆಯಾಗಬಾರದು ಎಂದು ನ್ಯಾಯಾಧೀಶರು ಹೇಳಿದರು. ಶಬರಿಮಲೆ ಕೇಸಿನ ವಿಚಾರಣೆ ನಡೆಸಿದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ನಾರಿಮನ್ ಮತ್ತು ಚಂದ್ರಚೂಡ್ ಅವರು ಕೂಡ ಭಾಗವಾಗಿದ್ದರು.
ಕೇರಳದ ಶಬರಿಮಲೆ ಅಯ್ಯಪ್ಪ ದೇವಾಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂದು 2018ರಲ್ಲಿ ನೀಡಿದ್ದ ತೀರ್ಪು ಮರು ಪರಿಶೀಲನೆಗೆ ಕೋರಿದ್ದ ಎಲ್ಲಾ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಕರ್ನಾಟಕದ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹೀಗೆ ಹೇಳಿದ್ದಾರೆ.