ಕುಂಬಳೆ: ಭೂಮಿಯ ಜೈವ ವೈವಿಧ್ಯತೆ ನಶಿಸಿ ತಾಪಮಾನ ಏರುತ್ತಿರುವುದು ಕಳವಳಕಾರಿಯಾದುದು. ಜೊತೆಗೆ ಮಾನವರು ಹತ್ತು ಹಲವಾರು ಮಾರಕ ರೋಗಗಳಿಂದ ಬಳಲುತ್ತಿದ್ದು, ಇಂತಹ ಸಂದಿಗ್ಧ ಕಾಲಾವಸ್ಥೆಯಲ್ಲಿ ಶುದ್ದ ಜಲ, ಗಾಳಿ ಹಾಗೂ ಆಹಾರ ನಮಗೊದಗಬೇಕು. ಇದಕ್ಕಾಗಿ ಜೈವ ವೈವಿಧ್ಯತೆಯನ್ನು ಕಾಪಾಡಿಕೊಂಡು ಮುನ್ನಡೆಸುವ ಪರಿಸರ ಪ್ರೇಮಿ ನಾಗರಿಕರ ಅಗತ್ಯವಿದೆಯೆಂದು ಕೇರಳ ಜೈವ ವೈವಿಧ್ಯತೆ ಮಂಡಳಿಯ ಕಾರ್ಯದರ್ಶಿ ಡಾ.ವಿ.ಬಾಲಕೃಷ್ಣ ನುಡಿದರು.
ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗ, ಜೈವ ವೈವಿಧ್ಯ ಸಮಿತಿ ಕುಂಬಳೆ ಗ್ರಾಮ ಪಂಚಾಯತಿ ಹಾಗೂ ಕಾಸರಗೋಡು ಪಕ್ಷಿ ಪ್ರೇಮಿ ತಂಡದ ಸಹಭಾಗಿತ್ವದೊಂದಿಗೆ ಕಿದೂರಲ್ಲಿ ಎರಡು ದಿನಗಳ ಕಾಲ ನಡೆದ ಕಿದೂರು ಬರ್ಡ್ ಫೆಸ್ಟ್ ೨೦೧೯ ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುಂಬಳೆ ಗ್ರಾಮ ಪಂಚಾಯತಿ ಅಧಕ್ಷ ಪುಂಡರೀಕಾಕ್ಷ ಕೆ.ಎಲ್.ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಕರಾದ ಪಿ.ಬಿಜು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಬಾಬು,ಸದಸ್ಯೆ ಅರುಣಾ ಆಳ್ವ ಮಡ್ವ, ಮಂಜುನಾಥ ಆಳ್ವ ಮಡ್ವ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾಟಿ ವೈದ್ಯೆ ಸೀತು, ಚಾಪೆ ಹೆಣೆಯುವ ಐತ್ತೆ, ಅಗ್ನಿ ಶಮನ ಚಿಕಿತ್ಸಕ ಶ್ರೀನಿವಾಸ ಆಳ್ವ ಕಳತ್ತೂರು, ವಿಷ ಜಂತು ಕಡಿತಕ್ಕೊಳಗಾದವರಿಗೆ ಚಿಕಿತ್ಸೆ ನೀಡುವ ಗೋಪಾಲಕೃಷ್ಣ ಶೆಟ್ಟಿ ಕುತ್ತಿಕ್ಕಾರ್, ಮಾರ್ಗದರ್ಶಿ ಜೈವ ಕೃಷಿಕರಾದ ಚಂದ್ರ ಕಾಜೂರು, ಪಕ್ಷಿ ಪ್ರೇಮಿ ಸಹೋದರರಾದ ರೋಹನ್ ಹಾಗೂ ರಾಕೇಶ್ ಇವರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯತಿ ಆಡಳಿತಾವಧಿಯಲ್ಲಿ ಜೈವ ವೈವಿಧ್ಯತೆಗೆ ವಿಶೇಷ ಮಹತ್ವನೀಡಿ ಪರಿಸರ ಸಂರಕ್ಷಣೆ ಚಟುವಟಿಕೆಗಳಿಗೆ ನೇತೃತ್ವ ನೀಡಿದ ಪಂಚಾಯತಿ ಅಧ್ಯಕ್ಷ ಪುಂಡರಿಕಾಕ್ಷ ಕೆ.ಎಲ್. ಅವರನ್ನೂ ಸನ್ಮಾನಿಸಲಾಯಿತು.
ಉತ್ತರ ಪ್ರದೇಶ, ತಮಿಳುನಾಡು,ಕರ್ನಾಟಕ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಪಕ್ಷಿ ಪ್ರೇಮಿಗಳು ಭಾಗವಹಿಸಿದ್ದರು. ಪ್ರದೇಶದಲ್ಲಿ ನಿರಂತರವಾಗಿ ಕಾಣಲ್ಪಡುವ ಕೇಸರಿ ಕುತ್ತಿಗೆಯ ಹಸಿರು ಪಾರಿವಾಳಗಳನ್ನೂ ನಿರೀಕ್ಷಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುರಕಲ್ಲು ಪಾರೆ ಪ್ರದೇಶ, ಕುಂಬಳೆ ಶಿರಿಯ ಅಳಿವೆ ಹಾಗೂ ಪೊಸಡಿ ಗುಂಪೆಗಳಲ್ಲಿ ಪಕ್ಷಿ ನಿರೀಕ್ಷಣೆ ಮಾಡಲಾಯಿತು. ನಿಶಾಚಾರಿ ಹಕ್ಕಿಗಳಿಗಾಗಿ ರಾತ್ರಿ ಹೊರ ಸಂಚಾರವನ್ನೂ ಹಮ್ಮಿಕೊಳ್ಳಲಾಗಿತ್ತು. ಗಿಡುಗಗಳ ಬಗ್ಗೆ ಅಧ್ಯಯನ ನಡೆಸಿದ ಸಿ.ಶಶಿಕುಮಾರ್ ಕಣ್ಣೂರು ತರಗತಿ ನಡೆಸಿದರು. ರಾಜು ಕಿದೂರು, ಮ್ಯಾಕ್ಸಿಂ ಕೊಲ್ಲಂಗಾನ, ಪ್ರಶಾಂತ್ ಗುಂಪೆ, ಮುರಳಿ ಮಾಧವ ಪೆಲ್ತಾಜೆ, ಗ್ಲೆನ್ ಕಿದೂರು, ಪ್ರದೀಪ್ ಕಿದೂರು,ಶ್ಯಾಮ್ ಪೂವನಕ್ಕರೆ ಮೊದಲಾದವರು ನೇತೃತ್ವ ನೀಡಿದರು. ಸ್ಥಳೀಯ ಯಸ್.ಕೆ.ಪಿ.ಫ್ರೆಂಡ್ಸ್ ಕ್ಲಬ್ ಸದಸ್ಯರು ಸಹಕರಿಸಿದರು. ಲವೀನ ಕಾರ್ಯಕ್ರಮ ನಿರ್ವಹಸಿದರು. ಅರಣ್ಯ
ಸಿಬ್ಬಂದಿ ಅಬ್ದುಲ್ಲ ಪರಂಬತ್ ವಂದಿಸಿದರು.