HEALTH TIPS

ಕುಂಬಳೆ ಉಪಜಿಲ್ಲಾ ಕಲೋತ್ಸವ ಸಂಪನ್ನ- ಮನಸ್ಸಿನಲ್ಲಿ ಅಂತರ್ಲೀನವಾಗಿರುವ ಕಲೆಗಳನ್ನು ಪೋಷಿಸಿದಲ್ಲಿ ಕಲಾವಿದನಾಗಿ ಗುರುತಿಸಲು ಸಾಧ್ಯ-ಸಂಸದ ರಾಜಮೋಹನ ಉಣ್ಣಿತ್ತಾನ್- ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಕಲೋತ್ಸವ ಸಮಾರೋಪ ಉದ್ಘಾಟಿಸಿ ಅಭಿಮತ


       ಪೆರ್ಲ:  ಮನುಷ್ಯ ಮನಸ್ಸಿನ ಸಾಮರ್ಥ್ಯ ಬಲು ಅಪಾರ. ಲೋಕದ ಯಾವುದೇ ಶಕ್ತಿಗೂ ಮನುಷ್ಯನ ಮನಸ್ಸನ್ನು ಅಧ್ಯಯನ ನಡೆಸಲು ಈವರೆಗೆ ಸಾಧ್ಯವಾಗಿಲ್ಲ.ವ್ಯಕ್ತಿ ತನ್ನ ಮಾನಸಿಕ ಸಾಮರ್ಥ್ಯದೊಂದಿಗೆ ಬೌದ್ಧಿಕ ಸಂಪತ್ತು ಹಾಗೂ ಬಹು ಬುದ್ಧಿಮತ್ತೆ ಉಪಯೋಗಿಸಿದಲ್ಲಿ ಉದ್ದೇಶಿತ ಗುರಿ ತಲಪಬಹುದು ಎಂದು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿದರು.
     ಶೇಣಿ ಶ್ರೀ ಶಾರದಾಂಬ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶನಿವಾರ ಸಂಜೆ ನಡೆದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭವನ್ನು ಔಪಚಾರಿಕವಾಗಿ ಉದ್ಘಾಟಿಸಿ ಮಾತನಾಡಿದರು.
     ಕಲೆಗೆ ಜೀವನದೊಂದಿಗೆ ಸಾದೃಶ್ಯವಿದೆ.ಕೇವಲ ಮೂರು ಬಣ್ಣಗಳಿಂದ ಸಾವಿರಾರು ಬಣ್ಣಗಳನ್ನು ಸೃಷ್ಟಿಸುವಂತೆ ಮನಸ್ಸಿನ ಭಾವನೆಗಳು ಅಥವಾ ಅರಿವಿನ ಸಾಮರ್ಥ್ಯದ ಮೇಲೆ ಪರಿಣಾಮವಾಗುವ ರೀತಿಯಲ್ಲಿ ಬುದ್ದಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪವೇ ಕಲೆ. ಪ್ರತಿಯೊಬ್ಬ ವ್ಯಕ್ತಿಯ ಸುಪ್ತ ಮನಸ್ಸಿನಲ್ಲಿ ಅಂತರ್ಲೀನವಾಗಿರುವ ನಾನಾ ಪ್ರಕಾರಗಳ ವೈವಿಧ್ಯಮಯ ಕಲೆಗಳನ್ನು ಮನಸ್ಸು, ಹಾಗೂ ಬೌದ್ಧಿಕ ಸಾಮರ್ಥ್ಯ ಉಪಯೋಗಿಸಿ ಪೋಷಿಸಿದಲ್ಲಿ ಕಲಾವಿದರಾಗಿ ಗುರುತಿಸಿಕೊಳ್ಳಬಹುದು.ಸಾಧನೆಗೆ ಹಪಹಪಿಸುವುದರ ಜತೆಗೆ ಚರಿತ್ರೆಯ ಭಾಗವಾಗಲು ಶ್ರಮಿಸಬೇಕು.೨೮ವರ್ಷಗಳ ಕಲೋತ್ಸವದ ಇತಿಹಾಸದಲ್ಲಿ  ಇದೇ ಪ್ರಥಮ ಬಾರಿ ಕಾಸರಗೋಡು ರಾಜ್ಯಮಟ್ಟದ ಕಲೋತ್ಸವದ ಅತಿಥೇಯ ಜಿಲ್ಲೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದರು.
       ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೆತ್ತವರು, ಗುರು ಹಿರಿಯರನ್ನು ಗೌರವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯ. ಮಾನವೀಯ ಮೌಲ್ಯ, ಮನುಷ್ಯರ ನಡುವಿನ ಸ್ನೇಹ, ಸಂಸ್ಕಾರಗಳನ್ನು ಎಲ್ಲಾ ಮತ ಧರ್ಮಗಳು ಬೋಧಿಸುತ್ತಿವೆ.
ಗುರುಗಳಿಗೆ ಬೆರಳನ್ನು ತುಂಡರಿಸಿ ನೀಡಿದ ಧರ್ಮ ಹಿಂದೂ ಧರ್ಮವಾದರೆ, ಗುರುಗಳ ಮೃತದೇಹ ಕೊಂಡೊಯ್ಯುವಾಗ ಪ್ರವಾಚಕ ಎದ್ದು ನಿಂತಿರುವುದು ಮುಸಲ್ಮಾನ ಧರ್ಮದಲ್ಲಿ.ಏಸು ಕ್ರಿಸ್ತನೂ ಗುರುವರ್ಯರನ್ನು ಗೌರವಿಸಲು ಹೇಳಿದ್ದಾನೆ.  ಕಲೆ ಎಂದರೆ ಸ್ನೇಹ. ವೈವಿಧ್ಯಮಯವಾದ ಅನೇಕ ಚಟುವಟಿಕೆಗಳನ್ನು, ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು ಕಲೆ ಆವರಿಸಿಕೊಂಡಿದೆ.ಇತರ ಮತ, ಧರ್ಮಗ್ರಂಥಗಳ ಅಧ್ಯಯನದಿಂದ ಸಾಮರಸ್ಯತೆ ಮೂಡುವುದಲ್ಲದೆ ಜಾತಿ, ಮತ, ಭಾಷೆ ಬೇಧಗಳಿಲ್ಲದೆ ಜನರನ್ನು ಒಗ್ಗೂಡಿಸಲು ಕಲೆಯಿಂದ ಮಾತ್ರ ಸಾಧ್ಯ. ಏಷ್ಯಾದಲ್ಲಿ ಅತ್ಯಪೂರ್ವವೆನಿಸಿರುವ ಅತಿದೊಡ್ಡ ಉತ್ಸವ ಕೇರಳ ಶಾಲಾ ಕಲೋತ್ಸವ.ಗ್ರಾಮೀಣ ಮಟ್ಟದ ಕ್ರೀಯಾಶಿಲತೆ, ಪ್ರತಿಭೆಗಳ ಅನಾವರಣ ಮತ್ತು ಸಾಧನಾಶೀಲರಿಗೆ ಪ್ರೋತ್ಸಾಹ ದೊರೆಯುವಲ್ಲಿ ಕಲೋತ್ಸವಗಳು ವೇದಿಕೆಯಾಗುತ್ತಿದೆ.ಸುಪ್ತ ಪ್ರತಿಭೆಗಳ ಅನಾವರಣದ ಮೂಲಕ ಹೊಸ ಮುಖಗಳನ್ನು ಕಲಾ ಜಗತ್ತಿಗೆ ಪರಿಚಯಿಸುವಲ್ಲಿ ಕಲೋತ್ಸವಗಳು ಯಶಸ್ವಿಯಾಗಿದೆ ಎಂದರು.
       ಕಾಸರಗೋಡು ಕ್ರೆöÊಸ್ತ ಧರ್ಮವಲಯ ಬೇಳ ಇಗರ್ಜಿಯ ಪ್ರಧಾನ ಧರ್ಮಗುರು ಫಾ.ಜೋನ್ ವಾಸ್ ಶುಭ ಹಾರೈಸಿ ಮಾತನಾಡಿ, ವೃತ್ತಿ ಯಾವುದೇ ಆಗಿದ್ದರೂ ಕಲೆಗಳಲ್ಲಿ ನಿರತರಾಗುವ ಸಂಸ್ಕೃತಿಯ ಪುನಶ್ಚೇತನವಾಗಲಿ. ಕಲೆ ಪ್ರತ್ಯೇಕವಾದ ಕಲಾವಿದರ ಸಮೂಹವನ್ನು ಇಂದು ಸೃಷ್ಟಿಸಿದ್ದು, ಅದರ ಬದಲು ಪ್ರತಿಯೊಂದು ವೃತ್ತಿಯವರೂ ಕಲಾವಿದರಾಗುವ, ಕಲಾ ವಿಷಯಗಳಲ್ಲಿ ತೊಡಗಿಸಿಕೊಳ್ಳುವಂತೆ ಆಗಬೇಕು ಎಂದರು.
     ವೃತ್ತ ನಿರೀಕ್ಷಕ, ಸಿನೆಮಾ ನಟ ಸಿಬಿ ಥಾಮಸ್ ಬಹುಮಾನ ವಿತರಿಸಿದರು. ಕಲೋತ್ಸವ ಸಂಘಟನಾ ಸಮಿತಿ ಅಧ್ಯಕ್ಷೆ, ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷೆ ಶಾರದಾ ವೈ, ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್, ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಸಿ., ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಸದಸ್ಯರಾದ ಸಿದ್ದಿಕ್ ಒಳಮೊಗರು, ಐತಪ್ಪ ಕುಲಾಲ್, ಪುಷ್ಪಾ ವಿ., ಕುಂಬಳೆ ಉಪ ಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಶೇಣಿ ಶಾಲಾ ಪ್ರಬಂಧಕ ಸೋಮಶೇಖರ ಜೆ.ಎಸ್., ಮುಖ್ಯ ಶಿಕ್ಷಕರ ಸಂಘಟನಾ ಸಮಿತಿ ಸಂಚಾಲಕ ವಿಷ್ಣುಪಾಲ, ಶೇಣಿ ಹೈಯರ್ ಸೆಕೆಂಡರಿ ಶಾಲೆ ಪ್ರಭಾರ ಪ್ರಿನ್ಸಿಪಾಲ್ ವಿಜಯಲಕ್ಷ್ಮಿ ವಿ., ಶೇಣಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶ್ರೀಶ ಕುಮಾರ್ ಎಂ.ಪಿ., ಮಾತೃ ಸಂಘ ಅಧ್ಯಕ್ಷರಾದ ರೇಖಜ್ಯೋತಿ, ಶಶಿಪ್ರಭಾ, ಗಣ್ಯರು, ವಿದ್ಯಾಭಿಮಾನಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು  ಉಪಸ್ಥಿತರಿದ್ದರು.
       ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶೇಣಿ ಎಯುಪಿ ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ನಾಯಕ್ ಜೆ.ಎಸ್. ಸ್ವಾಗತಿಸಿ, ಕಲೋತ್ಸವ ಸಮಿತಿ ಸಂಚಾಲಕ ಶಾಸ್ತ ಕುಮಾರ್ ಎ. ವಂದಿಸಿದರು.ನಿರ್ಮಲ್ ಕುಮಾರ್ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries