ಕಾಸರಗೋಡು: ವೇದ, ಉಪನಿಷತ್ತು, ಪುರಾಣಗಳೇ ಮೊದಲಾದ ಪರಂಪರೆಗಳ ತಿರುಳುಗಳನ್ನು ಜನಸಾಮಾನ್ಯರಿಗೆ ಸುಲಲಿತವಾಗಿ ಅಥ್ರ್ಯಸುವಲ್ಲಿ ದಾಸ ಸಾಹಿತ್ಯದ ಕೊಡುಗೆ ಮಹತ್ತರವಾದುದು. ದಾಸ ಸಾಹಿತ್ಯಕ್ಕೆ ಪುರಂದರದಾಸ, ಕನಕದಾಸ ಮೊದಲಾದ ದಾಸವರೇಣ್ಯರ ಕೊಡುಗೆ ಅಪಾರ. ಅವರ ಕೀರ್ತನೆಗಳಿಗೆ ಸಮಾಜದ ಓರೆ ಕೋರೆಗಳೇ ವಸ್ತುಗಳಾದವು ಎಂದು ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಘಟಕ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಹೇಳಿದರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ, ತಿರುಮಲ ತಿರುಪತಿ ದೇವಸ್ಥಾನಂ ದಾಸ ಸಾಹಿತ್ಯ ಪರಿಷತ್, ಕೂಡ್ಲು ಶ್ಯಾನುಭೋಗ ಸಂಗೀತ ಟ್ರಸ್ಟ್ ಬೆಂಗಳೂರು, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಭಾನುವಾರ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಕೇರಳ ರಾಜ್ಯ 2 ನೇ ದಾಸ ಸಾಹಿತ್ಯ ಸಮ್ಮೇಳನ ಮತ್ತು ಕಾಸರಗೋಡು ಜಿಲ್ಲಾ ಭಜನಾ ಸಾಂಸ್ಕøತಿಕ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿದ್ದುಕೊಂಡು ಕಾಸರಗೋಡಿನಲ್ಲಿ ನಡೆಯುತ್ತಿರುವ ಕನ್ನಡ ಕಾರ್ಯಕ್ರಮಗಳ ಅಂಕಿಅಂಶಗಳನ್ನು ನೋಡಿದಾಗ ಸಹಜವಾಗಿಯೇ ಅಚ್ಚರಿಯಾಗುತ್ತಿದೆ. ಕರ್ನಾಟಕದಲ್ಲಿ ನಡೆಯದಷ್ಟು ಕಾರ್ಯಕ್ರಮಗಳು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಸಿ ಬೆಳೆಸಲು ನಡೆಯುತ್ತಿರುವುದು ಶ್ಲಾಘನೀಯ ಎಂದರು. ಕಾಸರಗೋಡು ಕನ್ನಡ ಸಾಂಸ್ಕøತಿಕ ಕೇಂದ್ರವಾಗಿ ಬೆಳಗಲಿ ಎಂದು ಹೇಳಿದ ಅವರು ಶಿವರಾಮ ಕಾಸರಗೋಡು ಅವರ ನೇತೃತ್ವದಲ್ಲಿ ಕನ್ನಡ ಗ್ರಾಮದಲ್ಲಿ ನಿರಂತರ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತೋಷದಾಯಕ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಖ್ಯಾತ ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಮಾತನಾಡಿ ದಾಸ ಪರಂಪರೆ ಕನ್ನಡ ನಾಡಿನ ದೊಡ್ಡ ಕೊಡುಗೆ. ದಾಸರ ಪದಗಳು ಇಂದು ಮೂಲೆ ಮೂಲೆಗಳಲ್ಲಿ ಮೊಳಗುತ್ತಿದೆ. ದಾಸರ ಕೀರ್ತನೆಗಳು ಸುಸಂಸ್ಕøತ ಸಮಾಜಕ್ಕೆ ದಾರಿ ದೀಪ ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಎಡನೀರು ಮಠದ ಕಾರ್ಯದರ್ಶಿ ಜಯರಾಮ ಮಂಜತ್ತಾಯ ಎಡನೀರು, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಖ್ಯಾತ ಗಾಯಕಿ ವೃಂದಾ ಎಸ್.ರಾವ್, ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಅನುರಾಧ ಕುರುಂಜಿ, ಕಾಸರಗೋಡು ನಗರಸಭಾ ಸದಸ್ಯ ಶಂಕರ ಕೆ, ಅಧ್ಯಾಪಕ ವಿಶಾಲಾಕ್ಷ ಪುತ್ರಕಳ ಭಾಗವಹಿಸಿ ಶುಭಹಾರೈಸಿದರು. ಕೇರಳ ಕೇಂದ್ರೀಯ ವಿ.ವಿ. ಪೆರಿಯದ ಕನ್ನಡ ವಿಭಾಗ ಉಪನ್ಯಾಸಕ ಡಾ.ಸ್ವಾಮಿ ನ.ಕೋಡಿಹಳ್ಳಿ ಅವರು ವಿಶೋಷೋಪನ್ಯಾಸ ನೀಡಿದರು.
ಭಕ್ತಿ-ಭಾವ-ಗಾನ ಶಿಬಿರ-ಭಜನಾ ಕಮ್ಮಟ ಮತ್ತು ಗಾನವೈಭವವನ್ನು ಸುಪ್ರಸಿದ್ಧ ಕಲಾವಿದರಾದ ವೃಂದಾ ಎಸ್.ರಾವ್ ಹಾಗು ವೈಷ್ಣವ ರಾವ್ ಬೆಂಗಳೂರು ನಡೆಸಿಕೊಟ್ಟರು.
ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕ ಮಾತನಾಡಿದರು.