ಕಾಸರಗೋಡು: ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರ ಬಗ್ಗೆ ಮೊಸಳೆಕಣ್ಣೀರು ಸುರಿಸುವ ಬದಲು, ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಐಕ್ಯ ಹಾಗೂ ಎಡರಂಗಗಳು ತಯಾರಾಗಬೇಕು ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಅವರು ಕನ್ನಡ ಮಾಧ್ಯಮಕ್ಕೆ ಕನ್ನಡ ಬಾರದ ಶಿಕ್ಷಕರ ನೇಮಕಾತಿ ವಿರುದ್ಧ ಪಿಎಸ್‌ಸಿ ಕಚೇರಿ ಎದುರು ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ನಡೆದ ಧರಣಿ ಉದ್ಘಾಟಿಸಿ ಮಾತನಾಡಿದರು.
ಭಾಷಾ ಅಲ್ಪಸಂಖ್ಯಾತರು ಕಾಸರಗೋಡಿನ ಮೂಲ ನಿವಾಸಿಗಳಾಗಿದ್ದು, ಇವರಿಗೆ ಸಂವಿಧಾನಾತ್ಮಕವಾಗಿ ಲಭಿಸಿರುವ ಸವಲತ್ತನ್ನು ಕಸಿದುಕೊಳ್ಳಲು ಸರ್ಕಾರಕ್ಕೆ ಅಧಿಕಾರವಿಲ್ಲ. ಪ್ರಸಕ್ತ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ವ್ಯಾಪಕವಾಗಿ ನೇಮಿಸಲಾಗುತ್ತಿದ್ದು, ಇದಕ್ಕೆ ಲೋಕಸೇವಾ ಆಯೋಗವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕನ್ನಡದ ಒಂದಕ್ಷರ ಬಾರದ ಶಿಕ್ಷಕರು ಕನ್ನಡ ಮಕ್ಕಳಿಗೆ ಯಾವ ರೀತಿ ಬೋಧನೆ ಮಾಡಬಲ್ಲರು ಎಂಬ ಬಗ್ಗೆ ಸರ್ಕಾರವೇ ಆತ್ಮಾವಲೋಕನಮಾಡಬೇಕಾಗಿದೆ. ಕನ್ನಡ ಮಾಧ್ಯಮಕ್ಕೆ ಅನ್ಯಭಾಷಾ ಶಿಕ್ಷಕರನ್ನು ನೇಮಿಸುವ ಮೂಲಕ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಲಭಿಸಬೇಕಾದ ಹುದ್ದೆಗಳನ್ನು ಕಸಿದುಕೊಳ್ಳಲು ಸರ್ಕಾರ ಭಾರಿ ಗೂಢಾಲೋಚನೆ ನಡೆಸುತ್ತಿದೆ. ಭಾಷಾ ಅಲ್ಪಸಂಖ್ಯಾತರಿಗೆ ಮೀಸಲಿರಿಸಿರುವ ಹುದ್ದೆಗಳನ್ನು ಹೈಕೋರ್ಟು ಆದೇಶ ಉಲ್ಲಂಘಿಸಿ, ಅನ್ಯರಿಗೆ ನೀಡಲಾಗುತ್ತಿದೆ. ಇದುವರೆಗೆ ನಡೆದಿರುವ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಪಂಚಾಯಿತಿ ಸದಸ್ಯ, ಬಿಜೆಪಿ ಮುಖಂಡ ಸತ್ಯಶಂಕರ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿ.ಪ್ರಮಿಳಾ ಸಿ.ನಾಯ್ಕ್, ವಿ.ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ ಕೋಳಾರು, ರವೀಶ ತಂತ್ರಿ ಕುಂಟಾರು, ಪಿ. ಸುರೇಶ್ ಕುಮಾರ್ ಶೆಟ್ಟಿ, ಸದಾನಂದ ರೈ, ಸುಧಾಮ ಗೋಸಾಡ, ಪುಷ್ಪಾ ಅಮೆಕ್ಕಳ, ಸರೋಜಾ ಆರ್. ಬಲ್ಲಾಳ್, ಎ. ವಏಲಾಯುಧನ್, ಎ.ಕೆ ಕಯ್ಯಾರ್, ಹರೀಶ್ಚಂದ್ರ ಮಂಜೇಶ್ವರ, ಕುಞÂಕಣ್ಣನ್ ಸಹಿತ ಹಲವಾರು ಮಮದಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಪಿಎಸ್‌ಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.