ತಿರುವನಂತಪುರA:ಅಯೋಧ್ಯೆ ಭೂ ವಿವಾದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮುಂದಿನ ವಾರ ಮಹಿಳೆಯರ ಪ್ರವೇಶದ ಕುರಿತ ಪುನರ್ ಪರಿಶೀಲನಾ ಅರ್ಜಿಯ ತೀರ್ಪಿನ ಕುರಿತು ಚರ್ಚೆಗಳು ಆರಂಭವಾಗಿದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆ ಮುಂದಿನ ವಾರ ನಡೆದು ತೀರ್ಪು ಹೊರಬರಲಿದೆ. ಅಯೋಧ್ಯೆ ಕುರಿತ ತೀರ್ಪು ಶಬರಿಮಲೆ ದೇವಾಲಯ ಪ್ರವೇಶ ಕುರಿತ ವಿಚಾರಣೆ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ.
ಅಯೋಧ್ಯೆಯ ರಾಮ ಜನ್ಮಭೂಮಿ ಕಾನೂನು ವ್ಯಕ್ತಿತ್ವ ಅಲ್ಲ, ಆದರೆ ಮೂರ್ತಿ ನ್ಯಾಯವ್ಯಾಪ್ತಿಗೆ ಒಳಪಟ್ಟಿದೆ. ಭಕ್ತರ ನಂಬಿಕೆಗಳನ್ನು ನ್ಯಾಯ ಕೊಡುವಾಗ ಪರಿಗಣಿಸಬೇಕಾಗುತ್ತದೆ ಎಂದು ನಿನ್ನೆ ತೀರ್ಪು ಕೊಡುವಾಗ ಮುಖ್ಯ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದರು. ಕೇರಳದ ಶಬರಿಮಲೆ ವಿಚಾರದಲ್ಲಿ ಮುಟ್ಟಾದ ಮಹಿಳೆಯರು ಅಯ್ಯಪ್ಪ ದೇವಾಲಯದ ಒಳಗೆ ಪ್ರವೇಶಿಸಬಾರದು ಎನ್ನುವುದು ನಂಬಿಕೆ. ಶಬರಿಮಲೆಯ ಬೆಟ್ಟದಲ್ಲಿರುವ ಅಯ್ಯಪ್ಪನ ಬ್ರಹ್ಮಚರ್ಯೆ ಸ್ವಭಾವದಿಂದಾಗಿ ದೇವಾಲಯದೊಳಗೆ ಮುಟ್ಟಾದ ಹುಡುಗಿಯರು ಮತ್ತು ಮಹಿಳೆಯರು ಪ್ರವೇಶಿಸಬಾರದು ಎನ್ನುವುದು ಅಲ್ಲಿನ ವಾಡಿಕೆಯಾಗಿದೆ. ಅಯೋಧ್ಯೆ ತೀರ್ಪು ಖಂಡಿತವಾಗಿಯೂ ಶಬರಿಮಲೆ ದೇವಸ್ಥಾನದ ಪ್ರವೇಶದ ಪುನರ್ ಪರಿಶೀಲನಾ ಅರ್ಜಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಕಾನೂನು ತಜ್ಞ ಗೋವಿಂದ್ ಭರತನ್. ಭಕ್ತರ ನಂಬಿಕೆ ಮತ್ತು ಕಾನೂನು ವ್ಯಾಪ್ತಿಗೆ ಒಳಪಟ್ಟ ವಿಷಯ ಅಥವಾ ವ್ಯಕ್ತಿ ಶಬರಿಮಲೆ ವಿಚಾರದಲ್ಲಿ ಕೂಡ ಮುಖ್ಯವಾಗುತ್ತದೆ. ಹೀಗಾಗಿ ಶಬರಿಮಲೆ ತೀರ್ಪಿನ ಮೇಲೆ ಕೂಡ ಪರಿಣಾಮ ಬೀರಬಹುದು ಎನ್ನುತ್ತಾರೆ.
ಬಿಜೆಪಿ ಹಿರಿಯ ನಾಯಕ ಕುಮ್ಮನಮ್ ರಾಜಶೇಖರನ್, ಅಯೋಧ್ಯೆ ತೀರ್ಪಿನಲ್ಲಿ ಜನರ ಮೂಲಭೂತ ನಂಬಿಕೆಗಳ ಆಧಾರದ ಮೇಲೆ ತೀರ್ಪು ನೀಡಲಾಗಿದೆ. ಅದೇ ರೀತಿ ದೇವರ ನ್ಯಾಯವ್ಯಾಪ್ತಿಯ ವ್ಯಕ್ತಿತ್ವವನ್ನು ಒಪ್ಪಿಕೊಂಡಿದ್ದಾರೆ. ಶಬರಿಮಲೆ ವಿಚಾರದಲ್ಲಿ ಕೂಡ ಅದೇ ರೀತಿಯಿದೆ ಎಂದಿರುವರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೆ ಮೊದಲು ಮುಂದಿನ ವಾರವೇ ಶಬರಿಮಲೆ ತೀರ್ಪು ಹೊರಬರುವ ನಿರೀಕ್ಷೆಯಿದೆ.