ಹಾಂಗ್ ಝೌ: ಆಲಿಬಾಬಾ ಸಿಂಗಲ್ಸ್ ಡೇ ಶಾಪಿಂಗ್ ನಲ್ಲಿ ದಾಖಲೆಯ ವಹಿವಾಟು ನಡೆದಿದ್ದು, ಕೇವಲ ೨೪ ಗಂಟೆಗಳಲ್ಲಿ ಬರೊಬ್ಬರಿ ೩೮.೩ ಬಿಲಿಯನ್ ಡಾಲರ್ ನಷ್ಟು ವ್ಯಾಪಾರವಾಗಿದೆ.
ನ.೧೧ ರಂದು ಸಿಂಗಲ್ಸ್ ಡೇ ಪ್ರಯುಕ್ತ ೧೧ನೇ ಆವೃತ್ತಿಯ ಮೆಗಾ ೨೪ ಗಂಟೆಗಳ ಸಿಂಗಲ್ಸ್ ಡೇ ಶಾಪಿಂಗ್ ಕಾರ್ಯಕ್ರಮವನ್ನು ಆಲಿಬಾಬ ಆಯೋಜಿಸಿತ್ತು. ೨೦೧೮ ರಲ್ಲಿ ಒಂದು ದಿನದ ಶಾಪಿಂಗ್ ಈವೆಂಟ್ ನಲ್ಲಿ ಆಲಿಬಾಬ ೩೦.೮ ಬಿಲಿಯನ್ ಡಾಲರ್ ಮೊತ್ತದ ಸರಕುಗಳನ್ನು ಮಾರಾಟ ಮಾಡಿತ್ತು. ಆಲಿಬಾಬಾದ ವಿವಿಧ ವಿಭಾಗಗಳಲ್ಲಿ ಅರ್ಧಗಂಟೆಗಳಲ್ಲೇ ೧೦ ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆದಿದ್ದು ವಿಶೇಷವಾಗಿತ್ತು. ಈ ಬಾರಿಯ ಶಾಪಿಂಗ್ ಇವೆಂಟ್ ನಲ್ಲಿ ೨೦೦,೦೦೦ ಬ್ರಾಂಡ್ ಗಳು ಭಾಗವಹಿಸಿದ್ದವು.
ಸೈಬರ್ ಮಂಡೆ, ಬ್ಲ್ಯಾಕ್ ಫ್ರೈಡೆಯಂತಹ ಕಾರ್ಯಕ್ರಮಗಳಲ್ಲಿಯೂ ಈ ರೀತಿ ೨೪ ಗಂಟೆಗಳ ಸೇಲ್ಸ್ ನಡೆದು ಮಿಲಿಯನ್ ಗಟ್ಟಲೆ ವ್ಯಾಪಾರ ವಹಿವಾಟುಗಳು ನಡೆಯುತ್ತವೆ.