ನವದೆಹಲಿ: ದೆಹಲಿ ಮತ್ತು ಎನ್ ಸಿಆರ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯುಮಾಲಿನ್ಯಕ್ಕೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೈಡ್ರೋಜನ್ ಆಧಾರಿತ ಜಪಾನ್ ತಂತ್ರಜ್ಞಾನವನ್ನು ಅಳವಡಿಸುವ ಸಾಧ್ಯತೆಯನ್ನು ಅನ್ವೇಷಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಈ ವಿಷಯದ ಕುರಿತು ಚರ್ಚೆಗಳನ್ನು ತ್ವರಿತಗೊಳಿಸಿ ಡಿಸೆಂಬರ್ ೩ರೊಳಗೆ ತನ್ನ ಅನ್ವೇಷಣೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ತೀವ್ರ ಹದಗೆಟ್ಟು ತುರ್ತು ಪರಿಸ್ಥಿತಿಗೆ ತಲುಪಿದೆ. ಹವಾಮಾನ ಪರಿಸ್ಥಿತಿ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ಕೃಷಿಭೂಮಿಯಲ್ಲಿ ಬೆಂಕಿ ಹಚ್ಚುವುದರಿಂದ ವಾಯುಮಾಲಿನ್ಯ ಇಷ್ಟೊಂದು ದಟ್ಟಣೆಯಾಗಿದೆ ಎಂದು ಹೇಳಲಾಗಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನಿಯೋಜಿತ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಜಪಾನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ತಂತ್ರಜ್ಞಾನ ಬಗ್ಗೆ ಸೊಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಗ ಗಮನಕ್ಕೆ ತಂದಿದ್ದಾರೆ. ಇದನ್ನು ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಳಸಿ ವಾಯುಮಾಲಿನ್ಯವನ್ನು ನಿಯಂತ್ರಿಸಬಹುದೇ ಎಂದು ಪರಿಶೀಲಿಸಬೇಕು ಎಂದು ಹೇಳಿದೆ.