ಕುಂಬಳೆ: ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಧರ್ಮಕರ್ಮ ವಿಭಾಗದ ನೇತೃತ್ವದಲ್ಲಿ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ವೈದಿಕ ವಿಭಾಗದ ವತಿಯಿಂದ ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ವೇದಮೂರ್ತಿ ಗೋಪಾಲಕೃಷ್ಣ ಭಟ್ ನಾಯರ್ಪಳ್ಳ ಅವರಿಂದ ಆಸಕ್ತ ವೇದ ವಿದ್ಯಾರ್ಥಿಗಳಿಗೆ ರುದ್ರ ಮಂತ್ರ ತರಬೇತಿ ಕಾರ್ಯಕ್ರಮ ನಡೆಯಿತು.
ರುದ್ರ ತರಬೇತಿಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಉದಯಕುಮಾರ್ ನೂಜಿ ಪುತ್ತೂರು ಅವರು ಉಚಿತವಾಗಿ ನೀಡಿದ ಮಂತ್ರ ಗುಚ್ಛ ಪುಸ್ತಕಗಳನ್ನು ವಿತರಿಸಲಾಯಿತು.
ಶಂಖನಾದ, ಗುರುವಂದನೆ, ಗೋ ವಂದನೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಅಮ್ಮಂಕಲ್ಲು ರಾಮ ಭಟ್ ವಹಿಸಿದರು. ಮುಳ್ಳೇರಿಯ ಹವ್ಯಕ ಮಂಡಲದ ಸಂಘಟನಾ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ನರಹರಿ ಮಾಸ್ತರ್ ಪಾಲೆಚ್ಚಾರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಗುಂಪೆ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಸ್ವಾಗತಿಸಿ, ವೈದಿಕ ವಿಭಾಗ ಪ್ರಧಾನ ಕೇಶವ ಭಟ್ ಮಾಣಿ ವಂದಿಸಿದರು. ಶಾಂತಿ ಮಂತ್ರ, ಶಂಖನಾದದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.