ಕಾಸರಗೋಡು: ಜನಪ್ರತಿನಿಧಿಗಳಿಗಾಗಿ ಭಾಷಣ ಸ್ಪರ್ಧೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಜರುಗಿತು. ಸಂವಿಧಾನದಿಂದ ತೊಡಗಿ ತುರ್ತು ಪರಿಸ್ಥಿತಿ ವರೆಗೆ, ನೋಟು ನಿಷೇಧದಿಂದ ಹಿಡಿದು ಜಿ.ಎಸ್.ಟಿ ವರೆಗೆ ಎಲ್ಲವೂ ಈ ಸ್ಪರ್ಧೆಯಲ್ಲಿ ಚರ್ಚಾ ವಿಷಯವಾಗಿದ್ದುವು. ಕನ್ನಡ ಮತ್ತು ಮಲೆಯಾಳಂನಲ್ಲಿ ಈ ಸ್ಪರ್ಧೆ ನಡೆಯಿತು.
ಭಾತದ ಸಂವಿಧಾನ ರಚನೆಗೊಂಡು 70 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜರುಗುತ್ತಿರುವ ಕಾರ್ಯಕ್ರಮಗಳ ಅಂಗವಾಗಿ ಜಿಲ್ಲಾಡಳಿತೆ ವತಿಯಿಂದ ಸೋಮವಾರ ಈ ಸ್ಪರ್ಧೆ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪರ್ಧೆಯನ್ನು ಉದ್ಘಾಟಿಸಿ, ಆರಂಭದಿಂದ ಕೊನೆಯ ವರೆಗೆ ಕಾರ್ಯಕ್ರಮವನ್ನು ನಿಯಂತ್ರಿಸಿದರು.
ಸ್ಪರ್ಧೆಯಲ್ಲಿ ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಸದಸ್ಯೆ ಎಂ.ಇಂದಿರಾ ಪ್ರಥಮ ಬಹುಮಾನ ಪಡೆದರು. ಜಿಲ್ಲಾ ಪಂಚಾಯತ್ ಸದಸ್ಯೆ ಪಿ.ಸಿ.ಝುಬೈದಾ ದ್ವಿತೀಯ ಬಹುಮಾನ ಗಳಿಸಿದರು. ಬದಿಯಡ್ಕ ಗ್ರಾಮಪಂಚಾಯತ್ ಸದಸ್ಯ ಡಿ.ಶಂಕರ ತೃತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನವಿತರಣೆ ಇಂದು(ನ.26) ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಹುಸೂರ್ ಶೊರಸ್ತೇದಾರ್ ಕೆ.ನಾರಾಯಣನ್, ಸಹಾಯಕ ಜಿಲ್ಲಾಧಿಕಾರಿ ಪಿ.ಆರ್.ರಾಧಿಕಾ, ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು.